ಚಿತ್ರಕೂಟ ( ಉತ್ತರ ಪ್ರದೇಶ ) : ಹಲವು ದಶಕಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ಪಾರ್ಚ್ಡ್ ಬುಂದೇಲ್‌ಖಂಡ್ ಗ್ರಾಮದ ಜನರಿಗೆ ಮತ್ತೊಂದು ಸಮಸ್ಯೆ ಕಾಡುತ್ತಿದ್ದು, ನೀರಿನ ಸಮಸ್ಯೆ ಇರುವುದರಿಂದ ಈ ಗ್ರಾಮದ ಯುವಕರಿಗೆ ಮದುವೆಯಾಗಲು ಯಾರೂ ಹೆಣ್ಣು ಕೊಡುತ್ತಿಲ್ಲವಂತೆ.
ಹೌದು, ಇದು ಅಪರೂಪವಾದರೂ ನೈಜ ವಿಷಯ. ಬಹು ಸಂಖ್ಯೆಯಲ್ಲಿ ಬುಡಕಟ್ಟು ಜನರೇ ವಾಸವಾಗಿರುವ ಗೋಪಿಪುರ ಮತ್ತು ಪಾರ್ಚ್ಡ್ ಬುಂದೇಲ್‌ಖಂಡ್ ಗ್ರಾಮದ ನೀರಿನ ಸಮಸ್ಯೆ, ಇಂದು ನಿನ್ನೆಯದಲ್ಲ. ಹಲವು ದಶಕಗಳಿಂದ ಈ ಸಮಸ್ಯೆ ಇದೆ. ಪರಿಣಾಮ ನಿತ್ಯ ಗ್ರಾಮದ ಜನರು ಸುಡುಬಿಸಿಲಿಗೆ ಕಿ.ಮೀ ಗಟ್ಟಲೆ ನಡೆದು ನೀರು ಹೊತ್ತು ತರಬೇಕಾದ ಅನಿವಾರ್ಯತೆಯಿದೆ. ಸಣ್ಣ ಪುಟ್ಟ ಮಕ್ಕಳು ಪ್ರಾಣ ಪಣಕ್ಕಿಟ್ಟು ನೀರಿನ ಕೊಡ ಹೊತ್ತು ರೈಲ್ವೆ ಹಳಿ ದಾಟುವ ದೃಶ್ಯವಂತೂ ಗ್ರಾಮದಲ್ಲಿ ಸರ್ವೆ ಸಾಮಾನ್ಯವಾಗಿದೆ.
ಇಲ್ಲಿನ ನೀರಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಲು ಸ್ಥಳೀಯಾಡಳಿತ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡುತ್ತಿದೆ. ಆದರೆ, ಈ ನೀರು ಪಡೆಯಲು ಜನರ ಮಧ್ಯೆ ನೂಕು ನುಗ್ಗಲು ಉಂಟಾಗುತ್ತಿದೆ. ಕೊರೊನಾ ಮಹಾಮಾರಿಯ ಪ್ರಸ್ತುತ ಸಂದರ್ಭದಲ್ಲಿ ಜನರು ಸಾಮಾಜಿಕ ಅಂತರ ಗಾಳಿಗೆ ತೂರಿ ನೀರಿಗೆ ಮುಗಿ ಬೀಳುತ್ತಿದ್ದಾರೆ. ಇಷ್ಟೆಲ್ಲ ಸೆಣಸಾಡಿದರೆ ಅವರಿಗೆ 60 ಲೀ. ನೀರು ಸಿಗುತ್ತದೆ. ಇದು ಯಾವುದಕ್ಕೂ ಸಾಲುವುದಿಲ್ಲ. ಹೀಗಾಗಿ ಗ್ರಾಮದ ಜನರ ನೀರಿನ ಬವಣೆಗೆ ಕೊನೆಯೇ ಇಲ್ಲದಂತಾಗಿದೆ. ಪರಿಣಾಮ ಗ್ರಾಮದ ಯುವಕರು ಮದುವೆಯಾಗೋಣ ಅಂದರೆ ಯಾರೂ ಹೆಣ್ಣು ಕೊಡುತ್ತಿಲ್ಲವಂತೆ. ಗ್ರಾಮದ ಸುಮಾರು 40 ರಿಂದ 50 ಯುವಕರು ಮದುವೆಯಾಗದೇ ಉಳಿದಿದ್ದಾರೆ.
ಗ್ರಾಮದ ನೀರಿನ ಸಮಸ್ಯೆ ಎಷ್ಟರಮಟ್ಟಿಗೆ ಇದೆ ಎಂದರೆ ಇಲ್ಲಿಗೆ ಬೇರೆ ಗ್ರಾಮದಿಂದ ಮದುವೆಯಾಗಿ ಬಂದ ಯುವತಿಯರು ನಾಚಿಕೆಯಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಯುವತಿಯೊಬ್ಬಳು, ನಾನು ತುಂಬಾ ಒಳ್ಳೆಯ ಕುಟುಂಬದಿಂದ ಬಂದವಳು, ಇಲ್ಲಿ ನೀರಿನ ಸಮಸ್ಯೆ ಇರುವುದರಿಂದ ಬೇರೆ ದಾರಿ ಇಲ್ಲದೇ ನೀರಿಗಾಗಿ ದೂರದ ಪ್ರದೇಶಕ್ಕೆ ನಡೆಯುವ ಅನಿವಾರ್ಯತೆ ಇದೆ, ನಮ್ಮ ಈ ಪರಿಸ್ಥಿತಿಯನ್ನು ಯಾರಾದರೂ ನೋಡಿದರೆ ಎಂದು ನಾಚಿಕೆಯಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದೇನೆ ಎಂದು ಹೇಳಿದ್ದಾಳೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ಅಧಿಕಾರಿಗಳು, ಗ್ರಾಮದ ನೀರಿನ ಸಮಸ್ಯೆ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಅದನ್ನು ಪರಿಹರಿಸುವ ಕಾರ್ಯ ಮಾಡುತ್ತಿದ್ದೇವೆ ಎಂದಿದ್ದಾರೆ.