ನವದೆಹಲಿ: ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ನಾಲ್ಕು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಗೆ ಆಗಮಿಸಿದ್ದಾರೆ.
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಬಾಂಗ್ಲಾದೇಶ ಪ್ರಧಾನಿಯಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಂಡಿದ್ದಾರೆ.
ಮೊದಲನೆಯದಾಗಿ ನವದೆಹಲಿಯಲ್ಲಿ ವಿಶ್ವ ಆರ್ಥಿಕ ವೇದಿಕೆ ಆಯೋಜಿಸಿರುವ ಭಾರತದ ಆರ್ಥಿಕ ಶೃಂಗಸಭೆಯಲ್ಲಿ ಶೇಖ್ ಹಸೀನಾ ಪಾಲ್ಗೊಳ್ಳಲಿದ್ದಾರೆ. ತಮ್ಮ 4 ದಿನಗಳ ಪ್ರವಾಸದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನ ಭೇಟಿ ಮಾಡಲಿದ್ದು, ಶನಿವಾರ ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಹಸೀನಾ ಅವರ ಭಾರತ ಭೇಟಿಯ ಸಮಯದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಒಪ್ಪಂದಗಳನ್ನು ಹೊರತುಪಡಿಸಿ, ಉಭಯ ದೇಶಗಳ ನಡುವಿನ ರೋಹಿಂಗ್ಯಾ ಮತ್ತು ಟೀಸ್ತಾ ನದಿ ನೀರು ಹಂಚಿಕೆ ಸಮಸ್ಯೆಗಳನ್ನು ಕುರಿತು ಮಾತುಕತೆ ನಡೆಸುವ ನಿರೀಕ್ಷೆಯಿದೆ.