ನವದೆಹಲಿ: ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಬಾಂಗ್ಲಾದೇಶವು ನಿಜವಾದ ಸ್ನೇಹಿತನನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಹಸೀನಾ, “ಪ್ರಣಬ್ ಮುಖರ್ಜಿ ಬಾಂಗ್ಲಾದೇಶದ ನಿಜವಾದ ಸ್ನೇಹಿತ. ಅವರನ್ನು ಯಾವಾಗಲೂ ಬಾಂಗ್ಲಾದೇಶದ ಜನರು ಹೆಚ್ಚು ಗೌರವಿಸುತ್ತಾರೆ ಮತ್ತು ಪ್ರೀತಿಸುತ್ತಾರೆ. ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ ಅವರ ಅಚಲ ಬೆಂಬಲ ಮತ್ತು ಅದರಲ್ಲೂ ವಿಶೇಷವಾಗಿ ಭಾರತದ 13ನೇ ರಾಷ್ಟ್ರಪತಿಯಾಗಿದ್ದ ಅವರ ಕೊಡುಗೆಯನ್ನು ಅತ್ಯಂತ ಗೌರವದಿಂದ ಸ್ಮರಿಸಲಾಗುವುದು” ಎಂದಿದ್ದಾರೆ.
ವಿಮೋಚನಾ ಯುದ್ಧಕ್ಕೆ ಮುಖರ್ಜಿ ನೀಡಿದ ಕೊಡುಗೆಯನ್ನು ನೆನಪಿಸಿಕೊಂಡ ಶೇಖ್ ಹಸೀನಾ, 1971ರ ಬಾಂಗ್ಲಾದೇಶದ ವಿಮೋಚನಾ ಯುದ್ಧಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಯ ಸ್ಮರಣೆಯಾಗಿ 2013ರಲ್ಲಿ ಅವರಿಗೆ ಬಾಂಗ್ಲಾದೇಶ ಸರ್ಕಾರವು “ಬಾಂಗ್ಲಾದೇಶ ಮುಕ್ತಿಜುದ್ದೋ ಸೊಮ್ಮಮೋನ” (ವಿಮೋಚನಾ ಯುದ್ಧ ಗೌರವ)ವನ್ನು ನೀಡಿತು ಎಂದು ನೆನಪಿಸಿಕೊಂಡಿದ್ದಾರೆ.
21 ದಿನಗಳ ಹಿಂದೆ ಪ್ರಣಬ್ ಅವರಿಗೆ ಕೊರೊನಾ ದೃಢಪಟ್ಟಿತ್ತು. ಅಷ್ಟೇ ಅಲ್ಲದೆ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ 84 ವರ್ಷದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿಯವರು ಆಗಸ್ಟ್ 31ರಂದು ಕೊನೆಯುಸಿರೆಳೆದಿದ್ದಾರೆ.
“ಭಾರತದ ಖ್ಯಾತ ವಿದ್ವಾಂಸ, ರಾಜಕಾರಣಿ ಮತ್ತು ದಕ್ಷಿಣ ಏಷ್ಯಾದ ಅತ್ಯಂತ ಗೌರವಾನ್ವಿತ ನಾಯಕನಾಗಿ ಪ್ರಣಬ್ ಮುಖರ್ಜಿ ಎಲ್ಲರ ಗೌರವ ಮತ್ತು ಮೆಚ್ಚುಗೆ ಗಳಿಸಿದ್ದರು. ಭಾರತದ ಜನರ ಕಲ್ಯಾಣಕ್ಕಾಗಿ ‘ಭಾರತ ರತ್ನ’ ನೀಡಿ ಗೌರವಿಸಲಾಗಿತ್ತು. ಅವರ ಜನಸೇವೆ ಭವಿಷ್ಯದ ಪೀಳಿಗೆಯ ನಾಯಕರಿಗೆ ಸ್ಫೂರ್ತಿ ನೀಡುತ್ತದೆ ”ಎಂದು ಅವರು ಹೇಳಿದರು.
ಅವರು ದಕ್ಷಿಣ ಏಷ್ಯಾದ ರಾಜಕೀಯದಲ್ಲಿ ಮಿಂಚುವ ತಾರೆಯಾಗಿ ಉಳಿಯಲಿದ್ದಾರೆ ಎಂದು ಬಾಂಗ್ಲಾದೇಶದ ಪ್ರಧಾನಿ ಹಸೀನಾ ಹೇಳಿದರು.