ಅಹಮದಾಬಾದ್ : ಜಗತ್ತಿನಾದ್ಯಂತ ಜನರು ಕೊರೊನಾದಿಂದ ಪ್ರಾಣ ಉಳಿಸುವ ಬಗ್ಗೆ ಚಿಂತಿಸುತ್ತಿದ್ರೇ, ಇಲ್ಲೊಂದು ಬಡ ಕುಟುಂಬ ತನ್ನ ಮಗುವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಚಿಂತಿಸುತ್ತಿತ್ತು. ಆದರೆ, ಈ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ತನ್ನ ಮಗುವನ್ನು ಕಾಪಾಡಿಕೊಂಡ ದಂಪತಿಯ ಕರುಣಾಜನಕ ಕಥೆ ಇಲ್ಲಿದೆ.
ರಣು ಎಂಬ ಮಹಿಳೆ ತನ್ನ ಗರ್ಭಧಾರಣೆಯ ಬಗ್ಗೆ ಎಪ್ರಿಲ್ನಲ್ಲಿ ತಿಳಿದುಕೊಂಡಿದ್ದಳು. ಆದರೆ, ಇದಾದ ಎರಡು ತಿಂಗಳ ಬಳಿಕ ಆಕೆಗೆ ತೀವ್ರವಾಗಿ ಲಿವರ್ ಸಮಸ್ಯೆ ಕಂಡು ಬಂದಿತ್ತು. ಆದರೆ, ತನ್ನ ಗರ್ಭದಲ್ಲಿ ಮಗುವಿದ್ದು, ಅದರ ಜೊತೆ ಲಿವರ್ ಸಮಸ್ಯೆಯ ನೋವನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆಯಲ್ಲಿದ್ದ ಆಕೆ ಇಂದೋರ್‌ನಲ್ಲಿ ವೈದ್ಯರನ್ನು ಸಂಪರ್ಕಿಸಿದ್ದಳು.
ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಹಿತೈಷಿಯೊಬ್ಬರು ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಗೆ ಹೋಗಬೇಕೆಂದು ಸಲಹೆ ನೀಡಿದಾಗ ದಂಪತಿ ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದರು.
ಆದರೂ ಕಡೆಯ ಪ್ರಯತ್ನವೆಂದು ದಂಪತಿ ಅಹಮದಾಬಾದ್‌ನ ಆಸ್ಪತ್ರೆಗೆ ಭೇಟಿ ನೀಡಿದರು. ಒಂದು ವಾರದ ಚಿಕಿತ್ಸೆಯ ನಂತರ ರಣುವಿನ ಆರೋಗ್ಯ ಸುಧಾರಿಸಿತ್ತು. ಆದರೆ, ಗರ್ಭಧಾರಣೆಯ ಆರೂವರೆ ತಿಂಗಳ ನಂತರ ಮತ್ತೆ ಆಕೆಯ ಆರೋಗ್ಯ ಹದಗೆಟ್ಟಿತು. ಈ ಬಾರಿ ಮಗು ಮತ್ತು ತಾಯಿಯ ಜೀವಕ್ಕೆ ತೀವ್ರ ಅಪಾಯವಿದೆ. ಅಷ್ಟೇ ಅಲ್ಲ, ಮಗು ಬದುಕುವ ಸಾಧ್ಯತೆ ತೀರ ಕಡಿಮೆ ಎಂದು ಸ್ತ್ರೀರೋಗ ವಿಭಾಗದ ಡಾ. ಬೇಲಾ ಷಾ ಹೇಳಿದ್ದರು.
ಅಂತಿಮವಾಗಿ ಅಕ್ಟೋಬರ್ ತಿಂಗಳಲ್ಲಿ ರಣು ಕೇವಲ 436 ಗ್ರಾಂ ತೂಕದ ಮಗುವಿಗೆ ಜನ್ಮ ನೀಡಿದಳು. ಬಳಿಕ ಶಿಶು ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸೋನು ಅಖಾನಿ ಅವರು ಮಗುವಿನ ಆರೋಗ್ಯದ ಬಗ್ಗೆ ಇಂಚಿಂಚು ಕಾಳಜಿ ವಹಿಸಿದರು.
ಆಪರೇಷನ್ ಥಿಯೇಟರ್‌ನಲ್ಲಿದ್ದವರು ಈ ಶಿಶು ಕೆಲ ನಿಮಿಷಗಳಿಗಿಂತ ಹೆಚ್ಚು ಕಾಲ ಬದುಕುಳಿಯುವುದಿಲ್ಲ ಎಂದು ಭಾವಿಸಿದ್ದರು. ಆದರೆ, ನವಜಾತ ಶಿಶು ಬದುಕುಳಿಯಿತು. ಮಗುವನ್ನು ಕೂಡಲೇ ಆಸ್ಪತ್ರೆಯ ನವಜಾತ ತೀವ್ರ ನಿಗಾ ಘಟಕಕ್ಕೆ (ಎನ್‌ಐಸಿಯು) ಸ್ಥಳಾಂತರಿಸಿ ವೈದ್ಯರು ಆರೈಕೆಯಲ್ಲಿ ತೊಡಗಿದರು. ಮಗುವನ್ನು ಸುಮಾರು 54 ದಿನಗಳ ಕಾಲ ಎನ್‌ಐಸಿಯುನಲ್ಲಿ ಇಟ್ಟು, 930 ಗ್ರಾಂ ತೂಕ ಬಂದ ನಂತರ ಬಿಡುಗಡೆ ಮಾಡಲಾಯಿತು.