ಲಕ್ನೋ(ಉತ್ತರ ಪ್ರದೇಶ): ಬಾಬ್ರಿ ಮಸೀದಿ ನೆಲಸಮ ಪ್ರಕರಣದಲ್ಲಿ ಹಿರಿಯ ಬಿಜೆಪಿ ಮುಖಂಡ ಎಲ್. ಕೆ. ಅಡ್ವಾಣಿ ಅವರು ಇಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ.
ವಿಶೇಷ ಕೋರ್ಟ್ನ ನ್ಯಾಯಾಧೀಶ ಎಸ್. ಕೆ. ಯಾದವ್ ಅವರ ಪೀಠದಲ್ಲಿ 92 ವರ್ಷದ ಮಾಜಿ ಉಪ ಪ್ರಧಾನಿ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ತಮ್ಮ ಹೇಳಿಕೆ ನೀಡಿದರು. ಗುರುವಾರ ಇನ್ನೊಬ್ಬ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ತಮ್ಮ ಹೇಳಿಕೆ ದಾಖಲಿಸಿದ್ದರು.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯು ಪ್ರಸ್ತುತ ಸಿಆರ್‌ಪಿಸಿಯ ಸೆಕ್ಷನ್ 313ರ ಅಡಿಯಲ್ಲಿ ಪ್ರಕರಣದ 32 ಆರೋಪಿಗಳ ಹೇಳಿಕೆಗಳನ್ನು ದಾಖಲಿಸುವ ಹಂತದಲ್ಲಿದೆ.
ಪುರಾತನ ರಾಮ ದೇವಾಲಯವು ಬಾಬ್ರಿ ಮಸೀದಿ ಇದ್ದ ಸ್ಥಳದಲ್ಲಿ ಇತ್ತು ಎಂಬ ಕಾರಣಕ್ಕೆ ಅಯೋಧ್ಯೆಯ ಮಸೀದಿಯನ್ನು 1992 ರ ಡಿಸೆಂಬರ್ 6 ರಂದು 'ಕರ ಸೇವಕರು' ನೆಲಸಮ ಮಾಡಿದ್ದರು. ಆ ಸಮಯದಲ್ಲಿ ರಾಮಮಂದಿರದ ಆಂದೋಲನವನ್ನು ಮುನ್ನಡೆಸಿದವರಲ್ಲಿ ಅಡ್ವಾಣಿ ಮತ್ತು ಜೋಶಿ ಅವರು ಇದ್ದ ಕಾರಣ ಅವರ ವಿರುದ್ಧವೂ ಮೊಕದ್ದಮೆ ದಾಖಲಾಗಿತ್ತು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಆಗಸ್ಟ್ - 31 ರೊಳಗೆ ತನ್ನ ವಿಚಾರಣೆಯನ್ನು ಪೂರ್ಣಗೊಳಿಸಲು ಹೈಕೋರ್ಟ್ ಪ್ರಕರಣ ಸಂಬಂಧ ನಿತ್ಯ ವಿಚಾರಣೆ ನಡೆಸುತ್ತಿದೆ.