ರಕ್ಷಣಾ ಮೈತ್ರಿಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಕಳೆದ ನಾಲ್ಕು ವರ್ಷಗಳಲ್ಲಿ ಗಮನಾರ್ಹ ಪ್ರಗತಿ ಸಾಧ್ಯವಾಗಿದೆ ಎಂದು ಆಸ್ಟ್ರೇಲಿಯಾದ ನಿರ್ಗಮಿತ ರಾಯಭಾರಿ ಹರೀಂದರ್ ಸಿಧು ಹೇಳಿದ್ದಾರೆ. ವಿವಿಧ ರಕ್ಷಣಾ ಚಟುವಟಿಕೆಗಳಲ್ಲಿ ದ್ವಿಪಕ್ಷೀಯ ಮತ್ತು ಬಹು ಆಯಾಮದ ಯುದ್ಧಾಭ್ಯಾಸಗಳು ಮತ್ತು ಮಾತುಕತೆಗಳು ಸಹ ಸೇರಿವೆ. 2014ರಲ್ಲಿ 11 ಇದ್ದ ಇವುಗಳ ಸಂಖ್ಯೆ ಕಳೆದ ವರ್ಷ 39ಕ್ಕೆ ಏರಿದೆ ಎಂದು ಅವರು ವಿವರಿಸಿದರು.
ನಾಲ್ಕು ವರ್ಷಗಳ ರಾಯಭಾರತ್ವದ ಹೊಣೆಗಾರಿಕೆಯನ್ನು ನವದೆಹಲಿಯಲ್ಲಿ ಪೂರೈಸಿದ ನಂತರ ಕ್ಯಾನ್‌ಬೆರಾದಲ್ಲಿರುವ ಸಚಿವಾಲಯದ ಪ್ರಧಾನ ಕಚೇರಿಗೆ ಹಿಂದಿರುಗುತ್ತಿದ್ದ ಅವರು ಆಯ್ದ ಕೆಲ ವಿದೇಶಿ ಸಂಪಾದಕರ ಜೊತೆ ಮಾತನಾಡುತ್ತಿದ್ದರು.
ಎರಡೂ ದೇಶಗಳ ರಕ್ಷಣಾ ಪಡೆಗಳ ನಡುವಿನ ಪರಸ್ಪರ ಸರಕು ವಿನಿಮಯ ಹಂಚಿಕೆ ಒಪ್ಪಂದವನ್ನು ಮುಂದಿನ ಕೆಲ ತಿಂಗಳುಗಳಲ್ಲಿ ಉಭಯ ದೇಶಗಳು ಅಂತಿಮಗೊಳಿಸುವ ವಿಶ್ವಾಸವಿದೆ. “ಆಸ್ಟ್ರೇಲಿಯಾ ಮತ್ತು ಭಾರತ ದೇಶಗಳು ಏಷ್ಯಾದ ಎರಡು ಆತ್ಮೀಯ ಪಾಲುದಾರ ದೇಶಗಳಾಗಬಾರದು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಹಾಗೆ ನೋಡಿದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಡೆತಡೆಗಳು ಸಹ ಇಲ್ಲ. ಎರಡೂ ದೇಶಗಳ ನಡುವೆ ಪರಿಹರಿಸಲು ಆಗದಂತಹ ಯಾವುದೇ ವಿಷಯಗಳಾಗಲಿ ಅಥವಾ ಸವಾಲುಗಳಾಗಲಿ ಇಲ್ಲ. ಇಬ್ಬರ ನಡುವೆ ಸಮಾನ ದೃಷ್ಟಿಕೋನವಿದೆ. ಇಂಡೊ - ಪೆಸಿಫಿಕ್ ಪ್ರದೇಶದಲ್ಲಿ ನಾವು ಸಹಭಾಗಿತ್ವವನ್ನು ಅಭಿವೃದ್ಧಿಪಡಿಸುತ್ತಿರುವ ಈ ಸಂದರ್ಭದಲ್ಲಿ, ಭಾರತಕ್ಕೆ ಆಸ್ಟ್ರೇಲಿಯಾಗಿಂತ ಉತ್ತಮ ಮಿತ್ರನಿಲ್ಲ. ಅಲ್ಲದೇ ನಾವು ಭಾರತವನ್ನು ಅತಿ ಆತ್ಮೀಯ ಮಿತ್ರನಾಗಿ ನೋಡುತ್ತಿದ್ದೇವೆ” ಎಂದು ಶ್ರೀಮತಿ ಸಿಧು ಹೇಳಿದರು. ಸರಕು ಸಾಗಣೆ ಚರ್ಚೆಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಈ ಮಾತುಕತೆಗಳಲ್ಲಿ ನಾವು ಪ್ರಗತಿಯನ್ನು ಸಾಧಿಸುತ್ತಿದ್ದು, ಈ ವರ್ಷ ಅವು ಫಲಪ್ರದವಾಗುವಂತೆ ನೋಡಿಕೊಳ್ಳುವ ಕುರಿತು ನನಗೆ ಭರವಸೆಯಿದೆ” ಎಂದು ಹೇಳಿದರು.
ಭಾರತ ಇಂಥದೇ ಒಪ್ಪಂದವನ್ನು ಅಮೆರಿಕ, ಫ್ರಾನ್ಸ್ ಮತ್ತು ಸಿಂಗಾಪುರ ದೇಶಗಳೊಂದಿಗೂ ಹೊಂದಿದೆ. ಸ್ವಾಧೀನತೆ ಮತ್ತು ಉಭಯತ್ರ ಸೇವಾ ಒಪ್ಪಂದವನ್ನು (ಅಕ್ವಿಜಿಶನ್ ಅಂಡ್ ಕ್ರಾಸ್-ಸರ್ವೀಸಿಂಗ್ ಅಗ್ರೀಮೆಂಟ್ – ಎಸಿಎಸ್‌ಎ) ಜಪಾನ್ ದೇಶದೊಂದಿಗೆ ಅಂತಿಮಗೊಳಿಸುವುದಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ನಡುವೆ ಕಳೆದ ನವೆಂಬರ್‌ನಲ್ಲಿ ನಡೆದಿದ್ದ 2+2 ಉದ್ಘಾಟನಾ ಮಾತುಕತೆಯಲ್ಲಿ ಪ್ರಗತಿ ಸಾಧಿಸಲಾಗಿತ್ತು. ಜಪಾನ್‌ನೊಂದಿಗೆ ಒಪ್ಪಂದ ಪೂರ್ಣಗೊಂಡ ನಂತರ, ಇಂಡೊ-ಪೆಸಿಫಿಕ್ ಪ್ರದೇಶದಲ್ಲಿ ನೌಕಾ ಪಡೆಗಳ ಪರಸ್ಪರ ಕಾರ್ಯಾಚರಣಾ ಸಾಮರ್ಥ್ಯವನ್ನು ಎಚ್‌ಎ/ಡಿಆರ್ (ಹ್ಯುಮ್ಯಾನಿಟೇರಿಯನ್ ಅಸಿಸ್ಟನ್ಸ್ ಅಂಡ್ ಡಿಸಾಸ್ಟರ್ ರಿಲೀಫ್ – ಮಾನವೀಯ ನೆರವು ಮತ್ತು ಸಂಕಷ್ಟ ಪರಿಹಾರ) ಕಾರ್ಯಾಚರಣೆಗಳ ಮೂಲಕ ಸುಧಾರಿಸುತ್ತಲೇ ಭಾರತೀಯ ನೌಕಾ ಪಡೆಯ ಪೂರ್ವದ ಕಡೆಗಿನ ಕಾರ್ಯಾಚರಣೆಗಳನ್ನು ಆಸ್ಟ್ರೇಲಿಯಾ ಬಲಪಡಿಸಲಿದೆ. ಇಂತಹ ವಿಷಯಗಳನ್ನು ಒಳಗೊಂಡಿದ್ದ ರೈಸಿನಾ ಮಾತುಕತೆಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಅವರು ಈ ತಿಂಗಳು ನವದೆಹಲಿಗೆ ನೀಡಬೇಕಿತ್ತು ಹಾಗೂ ಈ ನಿಗದಿತ ಭೇಟಿಯಲ್ಲಿ ಒಪ್ಪಂದಗಳ ಕುರಿತ ಔಪಚಾರಿಕ ಘೋಷಣೆ ಹೊರಬೀಳಬೇಕಿತ್ತು. ಆದರೆ, ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದರಿಂದ, ಭಾರತ ಭೇಟಿಯನ್ನು ಜುಲೈ ತಿಂಗಳಿಗೆ ಮರುನಿಗದಿಪಡಿಸಲಾಗಿದೆ.
ʼಇಂಡೊ-ಪೆಸಿಫಿಕ್‌ನಲ್ಲಿ ಚೀನಾ ಸೇರ್ಪಡೆಯ ಗುರಿ ಇಲ್ಲʼ
ಆಸ್ಟ್ರೇಲಿಯಾದ ಇಂಡೊ-ಪೆಸಿಫಿಕ್ ವ್ಯೂಹವು ಆಸಿಯನ್ (ಎಎಸ್‌ಇಎನ್) ಅನ್ನು ಕೇಂದ್ರವಾಗಿರಿಸಿಕೊಂಡಿದ್ದು, ಈ ಪ್ರದೇಶದಲ್ಲಿ ದೃಢವಾಗಿ ನೆಲೆಯೂರಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಜೊತೆಗೆ ಕೆಲಸ ಮಾಡುವ ಉದ್ದೇಶವನ್ನು ಹೊಂದಿದೆ. ಇದರ ಜೊತೆಗೆ ವಾಣಿಜ್ಯ ಒಪ್ಪಂದಗಳನ್ನು ಬಲಪಡಿಸುವುದು, ಅಮೆರಿಕದ ಜೊತೆಗಿನ ಮಿತ್ರತ್ವಕ್ಕೆ ಆದ್ಯತೆ ಕೊಡುವುದು ಹಾಗೂ ಆ ಮೂಲಕ ಚೀನಾ ಜೊತೆಗೆ ರಚನಾತ್ಮಕ ಸಂಬಂಧಗಳನ್ನು ಕಟ್ಟುವುದು ನಮ್ಮ ಆದ್ಯತೆಯೇ ಹೊರತು ಚೀನಾವನ್ನು ಪ್ರತಿಬಂಧಿಸುವುದಲ್ಲ ಎಂಬ ಅಂಶಗಳಿಗೆ ನಿರ್ಗಮಿತ ರಾಯಭಾರಿ ಸಿಧು ಒತ್ತು ನೀಡಿದರು.
“ಸಾರ್ವಭೌಮತ್ವ ಹಾಗೂ ಸ್ವಾತಂತ್ರ್ಯ ಹೊಂದಿರುವ ದೇಶಗಳನ್ನು ಒಳಗೊಂಡಿರುವ ಮುಕ್ತ ಇಂಡೊ-ಪೆಸಿಫಿಕ್ ಅನ್ನು ನಾವು ಬಯಸುತ್ತೇವೆ. ತಮ್ಮ ಇಚ್ಛೆಯಂತೆ ಸ್ವಾತಂತ್ರ್ಯವನ್ನು ಬಳಸಿಕೊಂಡು ಸ್ಥಿರತೆ ಮತ್ತು ಸಮೃದ್ಧಿಯನ್ನು ಅವು ಸಾಧಿಸುವಂತಾಗಬೇಕು. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಯಾವುದೇ ತಕರಾರು ಇಲ್ಲ ಎಂದುಕೊಳ್ಳುತ್ತೇನೆ,” ಎಂದು ಇಂಡೊ-ಪೆಸಿಫಿಕ್ ಕುರಿತ ಸಾಮಾನ್ಯ ದೃಷ್ಟಿಕೋನದ ಕುರಿತು ಅವರು ವಿವರಿಸಿದರು.
ಇಂಡೊ-ಪೆಸಿಫಿಕ್ ಪ್ರಾದೇಶಿಕತೆ ಎಂಬುದು ಅಮೆರಿಕ ಚಾಲಿತ ಪರಿಕಲ್ಪನೆಯಾಗಿದ್ದು, ಚೀನಾ ದೇಶವನ್ನು ಒಳಗೊಂಡಿಲ್ಲ ಎಂದು ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್ ಅವರು ರೈಸಿನಾ ಮಾತುಕತೆ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯಕ್ಕೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಮತಿ ಸಿಧು, “ಯಾವುದೋ ಒಂದು ದೇಶ ಹಿಡಿತ ಹೊಂದಿರುವಂತಹ ಪರಿಕಲ್ಪನೆ ಇದಲ್ಲ ಹಾಗೂ ಯಾರನ್ನಾದರೂ ಒಳಗೊಳ್ಳುವ ಅಥವಾ ಹೊರಗಿಡುವಂತಹ ಪರಿಕಲ್ಪನೆಯೂ ಇಲ್ಲಿಲ್ಲ. ಯಾವ ವ್ಯೂಹಾತ್ಮಕ ವಾತಾವರಣದಲ್ಲಿ ನಾವು ವಾಸವಾಗಿದ್ದೇವೆಯೋ ಮತ್ತು ಯಾವುದನ್ನು ಅಲ್ಲಿಂದ ಪಡೆಯಲು ಬಯಸುತ್ತೇವೆಯೋ ಅಂತಹ ಪರಿಸರವನ್ನು ಸಾಕಾರಗೊಳಿಸಲು ಮಾಡಲಾಗುತ್ತಿರುವ ಪ್ರಾಮಾಣಿಕ ಪ್ರಯತ್ನವಷ್ಟೇ ಇದು. ಇಂತಹ ಭೌಗೋಳಿಕ ಪರಿಕಲ್ಪನೆಯಲ್ಲಿ, ಚೀನಾ ಸಹ ಇಂಡೊ-ಪೆಸಿಫಿಕ್‌ನ ಭಾಗವೇ” ಎಂದು ಉತ್ತರಿಸಿದರು.
ಅಮೆರಿಕ ಮತ್ತು ಜಪಾನ್ ಜೊತೆಗೆ ತಾನು ನಡೆಸಿದ ನೌಕಾ ಸಮರಾಭ್ಯಾಸದಲ್ಲಿ ಕ್ಯಾನ್‌ಬೆರಾ ಕೂಡಾ ಸೇರ್ಪಡೆಯಾಗುವುದಕ್ಕೆ ಭಾರತ ಕೊನೆಗೂ ಹಸಿರು ನಿಶಾನೆ ತೋರಬಹುದು ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಸಿಧು, “ಮಲಬಾರ್ ಸಮರಾಭ್ಯಾಸಕ್ಕೆ ಭಾರತ ಆಹ್ವಾನ ನೀಡುವುದಾದರೆ, ಆಸ್ಟ್ರೇಲಿಯಾ ಅದಕ್ಕೆ ಒಪ್ಪಿಕೊಂಡು, ಸ್ವೀಕರಿಸುವ ಸಾಧ್ಯತೆಗಳಿವೆ” ಎಂದು ಸ್ಪಷ್ಟಪಡಿಸಿದರು.
ʼಎಫ್‌ಎಟಿಎಫ್ ಅವಶ್ಯಕತೆಗಳಿಗೆ ಪೂರಕವಾಗಿ ಪಾಕಿಸ್ತಾನ ಇನ್ನೂ ಸ್ಪಂದಿಸಬೇಕಿದೆʼ
ಅಂತಾರಾಷ್ಟ್ರೀಯ ಕಾಳಧನ ವಹಿವಾಟು ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುವುದರ ಮೇಲೆ ನಿಗಾ ಇಟ್ಟಿರುವ ವಿಶ್ವಸಂಸ್ಥೆಯ ಕಾವಲು ಸಮಿತಿಯು, ಪ್ರಸ್ತುತ ನಿಗಾ ಪಟ್ಟಿಯಲ್ಲಿರುವ ಪಾಕಿಸ್ತಾನವನ್ನು ನಿಷೇಧಿತ ಪಟ್ಟಿಯಲ್ಲಿರಿಸದೇ ಮುಕ್ತಗೊಳಿಸುವ ಸಾಧ್ಯತೆಗಳ ಕುರಿತು ಪ್ರತಿಕ್ರಿಯಿಸಿದ ರಾಯಭಾರಿಯು, ಅದು ತಾಂತ್ರಿಕ ಮೌಲ್ಯಮಾಪನವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ಅದಾಗ್ಯೂ, ಸದ್ಯಕ್ಕೆ ಪಾಕಿಸ್ತಾನವನ್ನು ನಿಗಾ ಪಟ್ಟಿಯಲ್ಲಿಯೇ ಮುಂದುವರಿಸಲು ಆಸ್ಟ್ರೇಲಿಯಾ ಬಯಸುತ್ತದೆ. ಏಕೆಂದರೆ, ಈ ಮುಂಚಿನ ಸಭೆಗಳಲ್ಲಿ ನಿಗದಿಪಡಿಸಿರುವ ಮಾನದಂಡಗಳ ಪಾಲನಾ ಅವಶ್ಯಕತೆಗಳನ್ನು ಆ ದೇಶ ಇನ್ನೂ ಪೂರೈಸಿಲ್ಲ ಎಂದು ಅವರು ಹೇಳಿದರು.
“ಎಫ್‌ಎಟಿಎಫ್‌ನ ಪ್ರತಿಯೊಂದು ಸಭೆಯಲ್ಲಿಯೂ ಆಸ್ಟ್ರೇಲಿಯಾ ದೇಶವು ಪಕ್ಕಾ ತಾಂತ್ರಿಕ ಧೋರಣೆಯನ್ನು ಪ್ರದರ್ಶಿಸಿದೆ. ನಾವು ಸಾಧಿಸಬೇಕೆಂದಿರುವುದನ್ನು ಸಾಧ್ಯವಾಗಿಸುವುದಕ್ಕೆ ಇರುವ ಅತ್ಯುತ್ತಮ ಉಪಯುಕ್ತ ವಿಧಾನವಿದು. ನಿಜಕ್ಕೂ ಉತ್ತಮ ಫಲಿತಾಂಶ ಹೊರಬರಬೇಕು ಎಂದು ನಾವು ಬಯಸುತ್ತೇವೆ. ಇದರ್ಥ: ತನ್ನ ಮೇಲೆ ಹೇರಲಾಗಿರುವ ಈ ಮಾನದಂಡಗಳನ್ನು ಪಾಕಿಸ್ತಾನ ಪೂರೈಸಲೇಬೇಕು. ಆದ್ದರಿಂದ, ಸದರಿ ವಿಷಯ ಕುರಿತಂತೆ ನಾವು ತಾಂತ್ರಿಕ ಮಾರ್ಗವನ್ನು ಅನುಸರಿಸುತ್ತಿದ್ದು, ಪಾಕಿಸ್ತಾನದ ಪ್ರಗತಿಯನ್ನು ಗುಣಾತ್ಮಕ ನಿಯಮಗಳ ಆಧಾರದ ಮೇಲೆ ಅಳೆಯುತ್ತೇವೆ. ಅದು ಎಷ್ಟರ ಮಟ್ಟಿಗಿನ ಪ್ರಗತಿ ಸಾಧಿಸಿದೆ ಎಂಬುದನ್ನು ಪರಿಶೀಲಿಸುತ್ತೇವೆ,” ಎಂದು ಸಿಧು ವಿವರಿಸಿದರು.
ಪಾಕಿಸ್ತಾನವನ್ನು ನಿಗಾ ಪಟ್ಟಿಯಲ್ಲಿ ಉಳಿಸಬೇಕೆ ಅಥವಾ ಹೊರಗಿಡಬೇಕೇ ಎಂಬುದರ ಕುರಿತು ಇದೇ ಫೆಬ್ರವರಿ ೧೬ರಿಂದ ೨೧ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಎಫ್‌ಎಟಿಎಫ್‌ನ ಸರ್ವಸದಸ್ಯರ ಮತ್ತು ಜಂಟಿ ಕ್ರಿಯಾ ತಂಡಗಳ ಮಹತ್ವದ ಸಭೆಯು ನಿರ್ಣಯ ತೆಗೆದುಕೊಳ್ಳಲಿದೆ. ಇದಕ್ಕೂ ಮುನ್ನ ಏಷ್ಯ ಪೆಸಿಫಿಕ್ ತಂಡ (ಏಷ್ಯ ಪೆಸಿಫಿಕ್ ಗ್ರೂಪ್ – ಎಪಿಜಿ) ಅಥವಾ ಆಸ್ಟ್ರೇಲಿಯಾ ಶಾಖೆಯೂ ಸೇರಿದಂತೆ ಎಫ್‌ಎಟಿಎಫ್‌ನೊಂದಿಗೆ ಸಂಲಗ್ನಗೊಂಡಿರುವ ಒಂಬತ್ತು ದೇಶಗಳು ಕಳೆದ ವರ್ಷ ಕ್ಯಾನ್‌ಬೆರಾದಲ್ಲಿ ನಡೆಸಿದ್ದ ಸಭೆಯಲ್ಲಿ ಪಾಕಿಸ್ತಾನವನ್ನು ʼವಿಸ್ತೃತ ನಿಷೇಧಿತ ಪಟ್ಟಿʼಗೆ ಸೇರಿಸಿದ್ದವು. “ನಿಗಾ ಪಟ್ಟಿಯನ್ನು ನಾವು ಈಗಲೂ ಬೆಂಬಲಿಸುತ್ತಿದ್ದೇವೆ. ಏಕೆಂದರೆ, ನಮ್ಮ ತಾಂತ್ರಿಕ ಆಧರಿತ ವಿಶ್ಲೇಷಣೆ ಪ್ರಕಾರ, ಪಾಕಿಸ್ತಾನ ಆ ಎಲ್ಲ ಅವಶ್ಯಕತೆಗಳನ್ನು ಈಗಲೂ ಪೂರೈಸಿಲ್ಲ. ಒಂದು ವೇಳೆ ಪಾಕಿಸ್ತಾನ ತನ್ನ ಸಾಧನೆಯನ್ನು ಉತ್ತಮಪಡಿಸಿಕೊಂಡಲ್ಲಿ ನಾವು ಬೇರೆ ರೀತಿ ಯೋಚಿಸುತ್ತೇವೆ ಎಂದರ್ಥವಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಂತೂ ನಿಗಾ ಪಟ್ಟಿಗೆ ಸಂಬಂಧಿಸಿದಂತೆ ನಮ್ಮ ನಿಲುವು ಹೀಗಿದೆ,” ಎಂದು ಸಿಧು ಹೇಳಿದರು.
ʼಆರ್‌ಸಿಇಪಿಗೆ ಪುನಃ ಸೇರ್ಪಡೆಯಾಗುವ ಕುರಿತು ಭಾರತ ಪರಿಗಣಿಸಬೇಕುʼ
ಪ್ರಾದೇಶಿಕ ವಿಸ್ತೃತ ಆರ್ಥಿಕ ಸಹಭಾಗಿತ್ವಕ್ಕೆ (ರೀಜನಲ್ ಕಾಂಪ್ರೆಹೆನ್ಸಿವ್ ಎಕನಾಮಿಕ್ ಪಾರ್ಟನರ್‌ಶಿಪ್ – ಆರ್‌ಸಿಇಪಿ) ಮತ್ತೆ ಮರಳಬೇಕೆಂದು ಭಾರತದ ಪರ ವಾದಿಸಿದ ಅವರು, ಇದು ಭಾರತಕ್ಕಷ್ಟೇ ಅಲ್ಲ, ಇಡೀ ಪ್ರದೇಶದ ಹಿತಾಸಕ್ತಿಗೆ ಪೂರಕವಾಗಿದೆ ಎಂದು ಪ್ರತಿಪಾದಿಸಿದರು. “ಆರ್‌ಸಿಇಪಿ ಕೂಟಕ್ಕೆ ಮರಳುವ ಕುರಿತು ಭಾರತ ಗಂಭೀರವಾಗಿ ಪರಿಗಣಿಸುವ ಕುರಿತು ನಾವು ಆಶಾವಾದಿಗಳಾಗಿದ್ದೇವೆ. ತಾನು ಕಾಳಜಿ ಹೊಂದಿರುವ ವಿಷಯಗಳ ಕುರಿತು ಮಾತುಕತೆ ನಡೆಸುವ ಅವಕಾಶ ಭಾರತಕ್ಕಿದೆ ಎಂಬುದು ನಮ್ಮ ನಂಬಿಕೆ ಕೂಡಾ. ಆರ್‌ಸಿಇಪಿಗೆ ಹಿಂದಿರುಗುವುದರಿಂದ ಭಾರತಕ್ಕಷ್ಟೇ ಅಲ್ಲ, ಇಡೀ ಪ್ರದೇಶಕ್ಕೆ ಲಾಭವಾಗಲಿದೆ ಎಂಬುದು ಸಹ ನಮ್ಮ ನಂಬಿಕೆ. ಕೇವಲ ಆರ್ಥಿಕ ಸಮಗ್ರತೆಯನ್ನಷ್ಟೇ ಅಲ್ಲ; ಭಾರತ, ಆಸಿಯನ್ (ಎಎಸ್‌ಇಎಎನ್) ಮತ್ತು ಇತರ ದೇಶಗಳೊಂದಿಗಿನ ರಾಜಕೀಯ ಸಂಬಂಧಗಳನ್ನೂ ಇದು ಆಳಗೊಳಿಸುತ್ತದೆ,” ಎಂದು ಅವರು ಹೇಳಿದರು.
“ಒಂದು ವೇಳೆ ಭಾರತ ಆರ್‌ಸಿಇಪಿಯಲ್ಲಿ ಇದ್ದರೆ, ಮುಂದೆಂದಾದರೂ ಆರ್‌ಸಿಇಪಿಯಿಂದ ಅಥವಾ ಇನ್ಯಾವುದೋ ಆರ್ಥಿಕ ಸಹಕಾರ ಕೂಟದಿಂದ ತನ್ನನ್ನು ಹೊರಗಿಡುವ ಗಂಡಾಂತರದಿಂದ |ಭಾರತ ಪಾರಾದಂತಾಗುತ್ತದೆ. ಆರ್‌ಸಿಇಪಿ ತಂಡದಲ್ಲಿ ಭಾರತ ಅತ್ಯುತ್ತಮ ರಚನಾತ್ಮಕ ಸಹಭಾಗಿಯಾಗಬಲ್ಲುದು ಎಂದು ನಮಗೆ ಅನಿಸುತ್ತದೆ. ಆದ್ದರಿಂದ, ಭಾರತವನ್ನು ಮತ್ತೆ ಆರ್‌ಸಿಇಪಿಗೆ ಸ್ವಾಗತಿಸಲು ನಾವು ಉತ್ಸುಕರಾಗಿದ್ದು, ತನಗೆ ಯಾವಾಗ ಹಿಂದಿರುಗಬೇಕೆನಿಸುತ್ತದೋ ಆಗ ಭಾರತ ಮತ್ತೆ ಬರಬಹುದು,” ಎಂದ ಅವರು, ಮುಕ್ತ ಹಾಗೂ ಉದಾರ ವಾಣಿಜ್ಯ ನೀತಿಯು ಭಾರತದ ಆರ್ಥಿಕತೆಯನ್ನು ವೃದ್ಧಿಸುವುದಲ್ಲದೇ ಅದರ ಆರ್ಥಿಕ ಪ್ರಗತಿಗೂ ನೆರವಾಗುತ್ತದೆ ಎಂದು ವಾದಿಸಿದರು.
“ವ್ಯಾಪಾರ ಮತ್ತು ಗುಣಮಟ್ಟ ಕ್ಷೇತ್ರದಲ್ಲಿ ಭಾರತದ ಮುಕ್ತತೆ, ವ್ಯಾಪ್ತಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಅದಕ್ಕಿರುವ ಆಳ ಅನುಭವವು ದೇಶದ ಬೆಳವಣಿಗೆಯ ಮೇಲೆ ನಿಜಕ್ಕೂ ಪರಿಣಾಮ ಉಂಟು ಮಾಡುವುದು. ಆದರೆ, ನಿಮ್ಮದೇ ದೇಶದೊಳಗೆ ನೀವು ಮಾಡಬಹುದಾದ ಪ್ರಗತಿಗೆ ಮಿತಿಗಳಿರುತ್ತವೆ. ಉದಾಹರಣೆಗೆ, ಬಲವಾದ ಉತ್ಪಾದಕ ವಲಯವೊಂದನ್ನು ನಿರ್ಮಿಸಲು ಭಾರತ ಬಯಸುತ್ತದೆ ಅಂದುಕೊಳ್ಳೋಣ. ಆಗ, ಅದನ್ನು ಸಾಧಿಸಲು ಒಳಸುರಿಗಳು ಬೇಕಾಗುತ್ತವೆ. ಆ ಒಳಸುರಿಗಳು ಉತ್ತಮ ಗುಣಮಟ್ಟ, ತಾಳಿಕೆ ಭಾರತವನ್ನು ಹೊಂದಿದ್ದಲ್ಲದೇ ಅಗ್ಗವೂ ಆಗಿರಬೇಕಾಗುತ್ತವೆ. ಆದರೆ, ಈ ಒಳಸುರಿಗಳನ್ನು ಯಾವಾಗಲೂ ನಿಮ್ಮ ದೇಶದೊಳಗೇ ಪಡೆಯುವುದು ಸಾಧ್ಯವಿಲ್ಲ. ಹಾಗೆ ನೋಡಿದರೆ ಅವನ್ನು ನೀವು ಆಮದು ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮದೇ ಜನಸಂಖ್ಯೆಯನ್ನು, ಅದು ಎಷ್ಟೇ ದೊಡ್ಡದಿರಲಿ, ಅದನ್ನು ನಿಮ್ಮ ಮಾರುಕಟ್ಟೆಯನ್ನಾಗಿ ಮಾಡಿಕೊಳ್ಳುವುದು ಸಾಧ್ಯವಿಲ್ಲ. ನಿಮ್ಮ ಉತ್ಪಾದನೆಗಳನ್ನು ನೀವು ರಫ್ತು ಮಾಡಬೇಕಾಗುತ್ತದೆ, ಅದೂ ಸ್ಪರ್ಧಾತ್ಮಕ ಪರಿಸರದಲ್ಲಿ. ಇದು ಸಾಧ್ಯವಾಗಬೇಕೆಂದರೆ ನಿಮ್ಮ ಉತ್ಪಾದನೆಗಳು ಉತ್ತಮ ಗುಣಮಟ್ಟದ್ದೂ ಹಾಗೂ ಕಡಿಮೆ ಬೆಲೆಯುಳ್ಳದ್ದೂ ಆಗಿರಬೇಕಾಗುತ್ತದೆ,” ಎಂದು ನಿರ್ಗಮಿತ ರಾಯಭಾರಿ ವಿವರಿಸಿದರು. ಸಿಧು ಅವರ ತಂದೆತಾಯಿ ದೇಶ ವಿಭಜನೆಯ ಸಮಯದಲ್ಲಿ ಆಸ್ಟ್ರೇಲಿಯಾ ದೇಶಕ್ಕೆ ವಲಸೆ ಹೋದವರು.
ʼಪ್ರಜಾಪ್ರಭುತ್ವದಲ್ಲಿ ಭಾರತದ ಬಲ ಅಡಗಿದೆʼ
ಕಾಶ್ಮೀರದಲ್ಲಿರುವ ಪರಿಸ್ಥಿತಿ ಅಥವಾ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದಿರುವ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಶ್ರೀಮತಿ ಸಿಧು, ಭಾರತದ ಪ್ರಜಾಪ್ರಭುತ್ವವು ಪ್ರಸ್ತುತ ಅತ್ಯಂತ ಅವಶ್ಯಕವಾಗಿದೆ ಎಂಬ ಅಂಶಕ್ಕೆ ಒತ್ತು ಕೊಟ್ಟರು. “ಇಂಡೊ-ಪೆಸಿಫಿಕ್ ವ್ಯೂಹದ ಭಾಗವಾಗಿ ಈ ಪ್ರದೇಶದ ಸಶಕ್ತ ಪ್ರಜಾಪ್ರಭುತ್ವ ದೇಶಗಳೊಂದಿಗೆ ಕೆಲಸ ಮಾಡಲು ನಾವು ಬಯಸುತ್ತೇವೆ. ಭಾರತದ ಅತಿ ದೊಡ್ಡ ಶಕ್ತಿಯು ಅದರ ಪ್ರಜಾಪ್ರಭುತ್ವದ ಬಹುತ್ವ ಸಂಸ್ಕೃತಿಗಳಲ್ಲಿ ಅಡಗಿದೆ. ಆ ಸಂಪ್ರದಾಯಗಳ ಬುನಾದಿಯ ಮೇಲೆ, ಪ್ರಾದೇಶಿಕ ಅಭಿವೃದ್ಧಿ ಸಾಧಿಸಲು ಭಾರತದೊಂದಿಗೆ ಜೊತೆಯಾಗಿ ಕೆಲಸ ಮಾಡುವುದನ್ನು ನಾವು ಎದುರು ನೋಡುತ್ತಿದ್ದೇವೆ,” ಎಂದು ಸಿಧು ಹೇಳಿದರು.
ʼಆಸ್ಟ್ರೇಲಿಯಾದಲ್ಲಿ ಹ್ಯುವೆಯ್ ನಿಷೇಧಕ್ಕೆ ಸಮರ್ಥನೆʼ
೫ಜಿ ಜಾಲ ನಿರ್ಮಾಣಕ್ಕೆ ಸಲಕರಣೆಗಳನ್ನು ಒದಗಿಸಲು ಚೀನಾದ ದೂರಸಂಪರ್ಕ ದೈತ್ಯ ಹ್ಯುವೆಯ್ ಕಂಪನಿಗೆ ಅನುಮತಿ ನಿರಾಕರಿಸಿದ್ದರ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಧು, ಆಸ್ಟ್ರೇಲಿಯಾದ ಆಕ್ಷೇಪಣೆಯು ಅದರ ರಾಷ್ಟ್ರೀಯ ಹಿತಾಸಕ್ತಿಯನ್ನು ಆಧರಿಸಿದೆ ಎಂದು ಸಮರ್ಥಿಸಿಕೊಂಡರು. “೫ಜಿ ಕುರಿತು ತಾಂತ್ರಿಕ ನಿರ್ಧಾರ ಕೈಗೊಳ್ಳುವಲ್ಲಿ, ದೇಶದ ಸಾರ್ವಭೌಮತ್ವವನ್ನು ರಕ್ಷಿಸುವುದು ಎಲ್ಲಕ್ಕಿಂತ ಮುಖ್ಯ ಆದ್ಯತೆಯಾಗಿತ್ತು. ಈ ನಿರ್ಧಾರದಲ್ಲಿ ಬೇರೊಂದು ದೇಶದ ಅಥವಾ ವಿದೇಶಿ ಶಕ್ತಿಯ ವ್ಯಾಪಾರಿಗಳಿಗೆ ಅವಕಾಶ ಕೊಡಲಾಗದು. ತನ್ನ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗುವಂತಹ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಭಾರತಕ್ಕಿರುವ ಹಕ್ಕನ್ನು ನಾವು ಗೌರವಿಸುತ್ತೇವೆ,” ಎಂದು ಅವರು ಹೇಳಿದರು.
ಸ್ಮಿತಾ ಶರ್ಮಾ
ನವದೆಹಲಿ
Twitter-@smita_sharma