ಔರಂಗಾಬಾದ್: ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಹಳಿ ಮೇಲೆ ಮಲಗಿದ್ದ 16 ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು ಸಾವನ್ನಪ್ಪಿರುವ ಪ್ರಕರಣ ನಡೆದಿದ್ದು, ಅದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಣಾಪಾಯದಿಂದ ಪಾರಾದ ವಲಸೆ ಕಾರ್ಮಿಕನೊಬ್ಬ ಮಾತನಾಡಿದ್ದಾರೆ.
![Aurangabad train mishap](https://etvbharatimages.akamaized.net/etvbharat/prod-images/7124110_twdfdfd.jpg)
ವಲಸೆ ಕಾರ್ಮಿಕ ಧಿರೇಂದ್ರ ಸಿಂಗ್ ಮಾತನಾಡಿದ್ದು, ರೈಲು ಬರುತ್ತಿದ್ದ ವೇಳೆ ಹಳಿ ಮೇಲೆ ಮಲಗಿದ್ದ ಅನೇಕರ ಪ್ರಾಣ ಉಳಿಸಲು ನಾನು ಜೋರಾಗಿ ಕೂಗಿದ್ರೂ ಪ್ರಯೋಜನವಾಗಲಿಲ್ಲ. ಕ್ಷಣಮಾತ್ರದಲ್ಲಿ ಅವರ ಮೇಲೆ ರೈಲು ಹರಿದು ಹೋಯ್ತು ಎಂದು ಭೀಕರ ಘಟನೆಯ ಮಾಹಿತಿ ಬಿಚ್ಚಿಟ್ಟಿದ್ದಾರೆ.
36 ಕಿ.ಮೀ ಕ್ರಮಿಸಿ, ವಿಶ್ರಾಂತಿಗಾಗಿ ರೈಲ್ವೆ ಹಳಿ ಮೇಲೆ ಮಲಗಿದ್ರು... ಆದ್ರೆ ವಿಧಿಯಾಟಕ್ಕೆ ಬಲಿ!
ನಾವೆಲ್ಲರೂ ಮಧ್ಯಪ್ರದೇಶದಿಂದ ಬಂದಿದ್ದು ಇಲ್ಲಿನ ಎಸ್ಆರ್ಜಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆವು. ಆದರೆ ಕೆಲಸ ಬಂದ್ ಆಗಿದ್ದರಿಂದ ಎಲ್ಲರೂ ಮನೆಗೆ ಹೋಗಲು ನಿರ್ಧರಿಸಿದೆವು. ಅದರಂತೆ ರಾತ್ರಿ 7 ಗಂಟೆಗೆ ರೂಮ್ ಬಿಟ್ಟು ಬೆಳಗ್ಗೆ 4 ಗಂಟೆಗೆ ವಿಶ್ರಾಂತಿ ಪಡೆದುಕೊಳ್ಳುವ ಉದ್ದೇಶದಿಂದ ರೈಲ್ವೆ ಹಳಿ ಮೇಲೆ ಮಲಗಿದೆವು. ಇದರಲ್ಲಿ ನಾವು ಮೂವರು ಬೇರೆಡೆ ಮಲಗಿದ್ದೆವು. ರೈಲು ಬರುವುದು ಗೊತ್ತಾಗುತ್ತಿದ್ದಂತೆ ನಾನು ಎಚ್ಚರಗೊಂಡು ಜೋರಾಗಿ ಕೂಗಿ ಎಲ್ಲರನ್ನೂ ಎಚ್ಚರ ಮಾಡಲು ಮುಂದಾಗಿದ್ದೆ. ಆದರೆ ಈ ವೇಳೆ ಅವರಿಗೆ ಕೇಳಿಸಲಿಲ್ಲ. ಕ್ಷಣಾರ್ಧದಲ್ಲಿ ರೈಲು ಹರಿದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆ ಪಾಸ್ಗಾಗಿ ನೋಂದಣಿ ಮಾಡಿಸಿದ್ದೇವೆ. ಆದರೆ ನಮ್ಮ ಬಳಿ ಹಣವಿಲ್ಲದ ಕಾರಣ ನಡೆದುಕೊಂಡು ಹೋಗಿ ಮನೆ ಸೇರಿಕೊಂಡರೆ ಆಯ್ತು ಎಂದು ನಿರ್ಧರಿಸಿ ಹೊರಟಿದ್ದೆವು ಎಂದಿದ್ದಾರೆ. ಆದರೆ, ಈ ರೀತಿಯಾಗಿ ಘಟನೆ ನಡೆಯುತ್ತದೆ ಎಂದು ನಾವು ಉಹಿಸಿರಲಿಲ್ಲ ಎಂದು ಅವರು ಕಣ್ಣೀರು ಹಾಕಿದ್ದಾರೆ.