ಜೈಪುರ(ರಾಜಸ್ಥಾನ): ನಮ್ಮ ಪಕ್ಷದ ಶಾಸಕರು ಮತ್ತು ಸರ್ಕಾರವನ್ನು ಬೆಂಬಲಿಸುವ ಸ್ವತಂತ್ರ ಶಾಸಕರಿಗೆ ಆಮಿಷ ಒಡ್ಡುವ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿ ಕಾಂಗ್ರೆಸ್ ಮುಖ್ಯ ವಿಪ್ ಮತ್ತು ಶಾಸಕ ಮಹೇಶ್ ಜೋಶಿ ಅವರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಮಹಾ ನಿರ್ದೇಶಕರಿಗೆ ಬುಧವಾರ ಪತ್ರ ಬರೆದಿದ್ದಾರೆ.
"ಸರ್ಕಾರವನ್ನು ಅಸ್ಥಿರಗೊಳಿಸುವ ಸಲುವಾಗಿ ನಮ್ಮ ಶಾಸಕರು ಮತ್ತು ನಮ್ಮನ್ನು ಬೆಂಬಲಿಸುವ ಸ್ವತಂತ್ರ ಶಾಸಕರಿಗೆ ಆಮಿಷವೊಡ್ಡುವ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಕೆಲ ವಿಶ್ವಾಸಾರ್ಹ ಮೂಲಗಳ ಮೂಲಕ ನನ್ನ ಗಮನಕ್ಕೆ ಬಂದಿದೆ. ಇದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಅಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕ್ರಮಕೈಗೊಳ್ಳಿ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜೂನ್ 19 ರಂದು ನಡೆಯಲಿರುವ ರಾಜಸ್ಥಾನದ ಮೂರು ರಾಜ್ಯಸಭಾ ಸ್ಥಾನಗಳ ಚುನಾವಣೆಗೆ ಪಕ್ಷಗಳು ಸಜ್ಜಾಗಿವೆ. ಹೀಗಾಗಿ ರಾಜ್ಯಸಭಾ ಚುನಾವಣೆ ಕುರಿತು ಜೈಪುರದ ಶಿವ ವಿಲಾಸ್ ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನು ಬೆಂಬಲಿಸುತ್ತಿರುವ ಸ್ವತಂತ್ರ ಶಾಸಕರೊಂದಿಗೆ ಕಾಂಗ್ರೆಸ್ ಶಾಸಕರು ಭಾಗವಹಿಸಿದ್ದರು.
ಕಳೆದ ವರ್ಷ ಪಕ್ಷಗಳನ್ನು ಬದಲಾಯಿಸಿದ ಬಿಎಸ್ಪಿಯ ಆರು ಮಂದಿ ಸೇರಿದಂತೆ ಕಾಂಗ್ರೆಸ್ ಪಕ್ಷವು ಒಟ್ಟು 107 ಶಾಸಕರನ್ನು ಹೊಂದಿದೆ. 200 ಸದಸ್ಯರ ವಿಧಾನಸಭೆಯಲ್ಲಿ 13 ಸ್ವತಂತ್ರ ಶಾಸಕರಿದ್ದು, 12 ಜನರ ಬೆಂಬಲ ಪಕ್ಷಕ್ಕೆ ಇದೆ.