ಜಾನ್ಪುರ್: ಮತದಾನ ಪ್ರತಿಯೊಬ್ಬರ ಹಕ್ಕು. ಮತ ಚಲಾವಣೆ ಎಲ್ಲರ ಕರ್ತವ್ಯ. ಹೀಗೆ ಹೇಳುತ್ತಲೇ ಇದ್ದೇವೆ. ಆದರೆ ಚುನಾವಣೆ ದಿನ ಮತಗಟ್ಟೆಗಳತ್ತ ಹೋಗಲು ಹಿಂದೇಟು ಹಾಕುವವರೇ ಹೆಚ್ಚು. ಆದ್ರೆ 110 ವರ್ಷದ ಈ ಶತಾಯಿಷಿ ಅಜ್ಜಿ ಈ ವಯಸ್ಸಲ್ಲೂ ಹಕ್ಕು ಚಲಾಯಿಸುವ ಹುಮ್ಮಸ್ಸಿನಲ್ಲಿದ್ದಾರೆ.
ಉತ್ತರ ಪ್ರದೇಶದ ಜಾನ್ಪುರ್ ಜಿಲ್ಲೆಯ ಈ ವೃದ್ಧೆಯ ಹೆಸರು ಮಹಾರಾಣಿ ದೇವಿ. ವಯಸ್ಸು 110. ಜಿಲ್ಲೆಯಲ್ಲಿ ಇವರನ್ನು ಅತೀ ಹಿರಿಯ ಮತದಾರರೆಂದು ಗುರುತಿಸಲಾಗಿದೆ. ಸ್ವಾತಂತ್ರ್ಯ ನಂತರ ನಡೆದ ಚುನಾವಣೆಗಳಲ್ಲಿ ಈ ಅಜ್ಜಿ ಒಮ್ಮೆಯೂ ಮತದಾನ ಮಾಡುವುದನ್ನು ತಪ್ಪಿಸಿಲ್ಲ. ಅಷ್ಟೇ ಏಕೆ 110ನೇ ವಯಸ್ಸಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವೋಟ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಸ್ವಾತಂತ್ರ್ಯ ಚಳವಳಿ ವೇಳೆ ಮಹಿಳಾ ಘಟಕವನ್ನು ಮುನ್ನಡೆಸಿದ್ದ ಇವರ ಮನೆಗೆ ಜವಾಹರಲಾಲ್ ನೆಹರೂ, ಸರೋಜನಿ ನಾಯ್ಡು ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿದ್ದರು.
ಸ್ವಾತಂತ್ರ್ಯ ಹೋರಾಟಗಾರ ರಮೇಶ್ವರ್ ಸಿಂಗ್ ಅವರು ಪತ್ನಿಯಾಗಿರುವ ಮಹಾರಾಣಿ ದೇವಿ ಈವರೆಗೆ ಒಮ್ಮೆಯೂ ಮತದಾನ ಮಾಡುವುದನ್ನು ಬಿಟ್ಟಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ವಿಮಲಾ ಸಿಂಗ್ ಹೇಳಿದ್ದಾರೆ.
ಮತದಾನದ ವೇಳೆ ವೃದ್ಧರು ಹಾಗೂ ವಿಶೇಷಚೇತನರಿಗಾಗಿ ವಿಶೇಷ ಸೌಲಭ್ಯ ನೀಡಲು ಜಾನ್ಪುರ್ ಜಿಲ್ಲಾಡಳಿತ ಮುಂದಾಗಿದೆ. ಹಾಗೆಯೇ ಜಿಲ್ಲೆಯ ಅತೀ ಹಿರಿಯ ಮಹಿಳಾ ಮತದಾರರು ಎಂದು ಮಹಾರಾಣಿ ದೇವಿ ಅವರನ್ನು ಗೌರವಿಸಲಿದೆ.