ಗುವಾಹಟಿ: ಅಸ್ಸೋಂನಲ್ಲಿ ಪ್ರವಾಹ ಪ್ರತಾಪ ತಣಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಬುಧವಾರವೂ ಭಾರಿ ಪ್ರಮಾಣದ ಹಾನಿಯುಂಟಾಗಿದೆ. ನಿನ್ನೆ ಒಂದೇ ದಿನ 7 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 92ಕ್ಕೆ ಏರಿಕೆಯಾಗಿದೆ.
26 ಜಿಲ್ಲೆಗಳಲ್ಲಿ ಭಾರಿ ಪ್ರಕೋಪ ಉಂಟಾಗಿದ್ದು, ಸುಮಾರು 36 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಸ್ಸೋಂ ಸರ್ಕಾರ ತಿಳಿಸಿದೆ. ಅಸ್ಸೋಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ದೈನಂದಿನ ವರದಿಯ ಅನ್ವಯ, ಮೊರಿಗಾಂವ್ ಜಿಲ್ಲೆಯಲ್ಲಿ ಮೂರು ಜನರು, ಬಾರ್‌ಪೆಟಾದಲ್ಲಿ ಇಬ್ಬರು, ಸೋನಿತ್‌ಪುರ ಮತ್ತು ಗೋಲಾಘಾಟ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಮಂಗಳವಾರ ರಾಜ್ಯದ 26 ಜಿಲ್ಲೆಗಳಲ್ಲಿ ಸುಮಾರು 33 ಲಕ್ಷ ಜನರು ಸಂಕಷ್ಟಕ್ಕೊಳಗಾಗಿದ್ದರೆ, ಅದು ಈಗ 36 ಲಕ್ಷಕ್ಕೆ ಏರಿಕೆ ಆಗಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಜಿಲ್ಲಾಡಳಿತ ಮತ್ತು ಸ್ಥಳೀಯರ ಸಹಕಾರದಿಂದ ಕಳೆದ 24 ಗಂಟೆಗಳಲ್ಲಿ 3,991 ಜನರನ್ನು ರಕ್ಷಣೆ ಮಾಡಲಾಗಿದೆ.
ಪ್ರಸ್ತುತ, ಅಸ್ಸೋಂನಾದ್ಯಂತ 3,376 ಗ್ರಾಮಗಳು ಜಲಾವೃತವಾಗಿವೆ. 1,27,647.25 ಹೆಕ್ಟೇರ್ ಬೆಳೆ ನಾಶವಾಗಿದೆ. 23 ಜಿಲ್ಲೆಗಳಲ್ಲಿ 629 ಪರಿಹಾರ ಶಿಬಿರಗಳನ್ನ ತೆರೆಯಲಾಗಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಇದುವರೆಗೂ 66 ಪ್ರಾಣಿಗಳು ಸಾವನ್ನಪ್ಪಿವೆ. ಇನ್ನೂ 117 ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.