ಗುವಾಹಟಿ/ಪಾಟ್ನಾ: ಪ್ರವಾಹದ ರೌದ್ರನರ್ತನಕ್ಕೆ ಅಸ್ಸೋಂ ಹಾಗೂ ಬಿಹಾರ ರಾಜ್ಯಗಳು ತತ್ತರಿಸಿ ಹೋಗಿದ್ದು, ಎನ್ಡಿಆರ್ಎಫ್ ಹಾಗೂ ಜಿಲ್ಲಾಡಳಿತ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಅಸ್ಸೋಂನಲ್ಲಿ 120ಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಬಲಿಯಾಗಿದ್ದು, 27 ಜಿಲ್ಲೆಗಳ 25 ಲಕ್ಷ ಮಂದಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. 457 ಪರಿಹಾರ ಕೇಂದ್ರಗಳನ್ನು ತೆರೆದು ಜನರಿಗೆ ಆಶ್ರಯ ನೀಡಲಾಗುತ್ತಿದೆ. ಬ್ರಹ್ಮಪುತ್ರ, ಧನ್ಸಿರಿ, ಜಿಯಾಭರಲಿ, ಕೋಪಿಲಿ, ಬೆಕಿ, ಬರಾಕ್ ಮತ್ತು ಕುಶಿಯಾರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ.
ಪ್ರವಾಹ ಪೀಡಿತ ಜಿಲ್ಲೆಗಳ ಪೈಕಿ ಗೋಲ್ಪಾರಾದಲ್ಲೇ ಅತಿಹೆಚ್ಚು ಜನರು (4.7 ಲಕ್ಷ) ಮನೆ-ಮಠ ಕಳೆದುಕೊಂಡಿದ್ದಾರೆ. ನಂತರದ ಸ್ಥಾನಗಳಲ್ಲಿ ಬಾರ್ಪೆಟಾ (4.24 ಲಕ್ಷ) ಮತ್ತು ಮೊರಿಗಾಂವ್ (3.75 ಲಕ್ಷ) ಜಿಲ್ಲೆಗಳಿವೆ. ವಿಶ್ವ ಪ್ರಸಿದ್ಧ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಸಂಪೂರ್ಣ ಮುಳುಗಡೆಯಾಗಿದ್ದು, 132 ಪ್ರಾಣಿಗಳು ಸಾವನ್ನಪ್ಪಿವೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಅಪಾಯದ ಸುಳಿಯಲ್ಲಿ ಬಿಹಾರದ 11 ಜಿಲ್ಲೆಗಳು:
ಬಿಹಾರದಲ್ಲಿ 11 ಜಿಲ್ಲೆಗಳ 15 ಲಕ್ಷ ಜನರು ಪ್ರವಾಹದ ಸುಳಿಯಲ್ಲಿ ಸಿಲಿಕಿದ್ದು, ಈವರೆಗೆ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ತಿಳಿಸಿದೆ.
ದರ್ಭಂಗಾ ಜಿಲ್ಲೆಯೊಂದರಲ್ಲೇ 5.36 ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಪೈಕಿ ಒಂದಿಷ್ಟು ಜನರನ್ನು ಸ್ಥಳಾಂತರಗೊಳಿಸಲಾಗಿದ್ದು, ಇನ್ನೊಂದಿಷ್ಟು ಮಂದಿ ಮನೆಗಳೊಳಗೆ ಸಿಲುಕಿದ್ದಾರೆ. 26 ಪರಿಹಾರ ಕೇಂದ್ರಗಳನ್ನು ತೆರೆದು 14,011 ಜನರಿಗೆ ಆಶ್ರಯ ನೀಡಲಾಗುತ್ತಿದೆ.
ಗಂಡಕ್ ಮತ್ತು ಕೋಸಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಎಚ್ಚರಿಕೆ ವಹಿಸುವಂತೆ ಸಿಎಂ ನಿತೀಶ್ ಕುಮಾರ್ ಸೂಚಿಸಿದ್ದಾರೆ.