ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ರದ್ದುಗೊಂಡಿದ್ದು, ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಮಹತ್ವದ ಗೆಲುವು ಸಿಕ್ಕಿದೆ. ಇದಕ್ಕೆ ಬಿಜೆಪಿ ಬೀಷ್ಮ ಎಲ್ ಕೆ ಅಡ್ವಾಣಿ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಎನ್ಡಿಎ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ಮಾಜಿ ಉಪಪ್ರಧಾನಿ ಹಾಗೂ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಸಂತಸ ವ್ಯಕ್ತಪಡಿಸಿದ್ದು, ಜನಸಂಘದ ಕನಸು ಸಾಕಾರಗೊಂಡಿದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಸುಭದ್ರ ದೇಶ ಕಟ್ಟಲು ಕೇಂದ್ರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಹಿಂದಿನಿಂದಲೂ ಅರ್ಟಿಕಲ್ 370 ರದ್ದು ಮಾಡುವುದು ಬಿಜೆಪಿ ಮಹತ್ವದ ನಿರ್ಧಾರಗಳಲ್ಲಿ ಒಂದಾಗಿತ್ತು. ಇದೀಗ ಅದು ಸಾಕಾರಗೊಂಡಿದೆ ಎಂದಿದ್ದಾರೆ. ಬರುವ ದಿನಗಳಲ್ಲಿ ಖಂಡಿತವಾಗಿ ಜಮ್ಮು- ಕಾಶ್ಮೀರ ಹಾಗೂ ಲಡಾಕ್ನಲ್ಲಿ ಶಾಂತಿ ಸಮೃದ್ಧಿ ನೆಲೆಸಿ ಅಭಿವೃದ್ಧಿ ಕಾಣಲಿ ಎಂದಿದ್ದಾರೆ.
ರಾಜ್ಯಸಭೆಯಲ್ಲಿ ಆರ್ಟಿಕಲ್ 370 ರದ್ದು ಮಾಡಿ ಅಮಿತ್ ಶಾ ಹೇಳಿಕೆ ನೀಡುತ್ತಿದ್ದಂತೆ ಕೆಲವೊಂದು ಪಕ್ಷಗಳು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ರೆ, ಕೆಲ ಪಕ್ಷಗಳು ಕೇಂದ್ರದ ನಿರ್ಧಾರವನ್ನ ಸ್ವಾಗತಿಸಿವೆ. ಇನ್ನು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಕೇಂದ್ರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ, ಭಾರತದ ಇತಿಹಾಸದಲ್ಲೇ ಇಂದು ಕರಾಳ ದಿನ ಎಂದಿದ್ದಾರೆ.