ಕಮನ್ (ರಾಜಸ್ಥಾನ) : ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಎಟಿಎಂ ದರೋಡೆ ಮಾಡಿ ತಲೆ ಮರೆಸಿಕೊಂಡಿದ್ದ ರಾಜಸ್ಥಾನದ ಉದ್ಕಾ ಪೊಲೀಸ್ ಠಾಣಾ ವ್ಯಾಪ್ತಿಯ ಕಮನ್ ಪ್ರದೇಶದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು, ಅ.2 ರಂದು ಮುಂಜಾನೆ 2 ಗಂಟೆಗೆ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿ, ಕೆ.ಆರ್ ಪುರಂ ಬಳಿಯ ಎಟಿಎಂ ಒಂದರಿಂದ 12 ಲಕ್ಷ ರೂ. ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಬೆಂಗಳೂರು ಪೊಲೀಸರು, ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ರಾಜಸ್ಥಾನದ ಉದ್ಕಾ ಠಾಣೆ ಪೊಲೀಸರ ಸಹಾಯದಿಂದ, ಆರೋಪಿಗಳ ಗ್ರಾಮ ಕಮನ್ಗೆ ತೆರಳಿ ಬಂಧಿಸಿದ್ದಾರೆ. ಸಾಜಿದ್ ಮತ್ತು ಹಾರೂನ್ ಬಂಧಿತ ಆರೋಪಿಗಳು. ಬಂಧಿತರಿಂದ ದರೋಡೆಗೆ ಬಳಸಲಾದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಉದ್ಕಾ ಠಾಣೆಗೆ ಕರೆ ತಂದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ಕಮನ್ ಡಿಎಸ್ಪಿ ಪ್ರದೀಪ್ ಯಾದವ್ ಮಾಹಿತಿ ನೀಡಿದ್ದಾರೆ.
ಬಂಧಿತರು ಕಮನ್ ಪ್ರದೇಶದ ವಿವಿಧ ಅಪರಾಧ ಕೃತ್ಯಗಳ ಮಾಸ್ಟರ್ ಮೈಂಡ್ ಆಗಿದ್ದಾರೆ. ಇವರೊಂದಿಗೆ ಅಪರಾಧಗಳಲ್ಲಿ ತೊಡಗುತ್ತಿದ್ದ ವಿವಿಧ ಗ್ರಾಮಗಳ 29 ಜನರನ್ನು ಗುರುತಿಸಲಾಗಿದೆ. ಈ ಪೈಕಿ ಲೆಬ್ಡಾ ಗ್ರಾಮದ 12, ಉದೈಕಾ ಗ್ರಾಮದ 15, ಟೈರಾ ಗ್ರಾಮದ 15 ಮಂದಿ ಇದ್ದಾರೆ ಎಂದು ಕಮನ್ ಡಿಎಸ್ಪಿ ಪ್ರದೀಪ್ ಯಾದವ್ ತಿಳಿಸಿದ್ದಾರೆ. ಇವರು ಎಟಿಎಂ ಲೂಟಿ, ಆನ್‌ಲೈನ್ ವಂಚನೆ ಸೇರಿದಂತೆ ವಿವಿಧ ಅಪರಾಧಗಳಲ್ಲಿ ತೊಡಗುತ್ತಿದ್ದರು ಎಂದು ತಿಳಿಸಿದ್ದಾರೆ.