ನವದೆಹಲಿ: ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕದನ ವಿರಾಮ ಉಲ್ಲಂಘನೆ ಮತ್ತು ಭಯೋತ್ಪಾದಕ ಚಟುವಟಿಕೆಗಳ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ ಅವರು ಗುರುವಾರ ಕಾಶ್ಮೀರ ಕಣಿವೆಗೆ ಭೇಟಿ ನೀಡಲಿದ್ದಾರೆ.
ಪಾಕಿಸ್ತಾನ ಸೇನೆಯು ಭಯೋತ್ಪಾದಕರನ್ನು ಭಾರತಕ್ಕೆ ತಳ್ಳುವ ಪ್ರಯತ್ನವನ್ನು ಹೆಚ್ಚಿಸಿರುವುದರಿಂದ ಮತ್ತು ಅದರ ಉದ್ದೇಶಗಳನ್ನು ಪೂರೈಸಲು ದೊಡ್ಡ ಪ್ರಮಾಣದ ಕದನ ವಿರಾಮ ಉಲ್ಲಂಘನೆಯಲ್ಲಿ ತೊಡಗಿರುವ ಕಾರಣ ಈ ಭೇಟಿ ಮಹತ್ವದ್ದಾಗಿದೆ.
15 ತಂಡಗಳು ನಡೆಸಿದ ಭಯೋತ್ಪಾದಕ ಮತ್ತು ಪ್ರತಿ - ಒಳನುಸುಳುವಿಕೆ ಕಾರ್ಯಾಚರಣೆಗಳನ್ನು ಪರಿಶೀಲಿಸಲು ಸೇನಾ ಮುಖ್ಯಸ್ಥರು ಶ್ರೀನಗರದಲ್ಲಿರುತ್ತಾರೆ ಹಾಗೂ ನಿಯಂತ್ರಣ ರೇಖೆಯಲ್ಲಿನ ಹುದ್ದೆಗಳ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸುವ ಸಾಧ್ಯತೆಯಿದೆ ಎಂದು ಸೇನೆಯ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ಇತ್ತೀಚೆಗೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ದುಧ್ನಿಯಲ್ ಪ್ರದೇಶದಲ್ಲಿ ಭಯೋತ್ಪಾದಕ ಲಾಂಚ್‌ಪ್ಯಾಡ್‌ಗಳ ವಿರುದ್ಧ ಭಾರತೀಯ ಸೇನೆಯು ನಿಖರ ದಾಳಿ ನಡೆಸಿತ್ತು.
ಕೇರನ್ ವಲಯದಲ್ಲಿ ಪಾಕಿಸ್ತಾನ ಸೇನೆಯು ಕದನ ವಿರಾಮ ಉಲ್ಲಂಘನೆ ಮತ್ತು ಒಳನುಸುಳುವಿಕೆ ಪ್ರಯತ್ನಗಳ ನಂತರ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಅಲ್ಲದೇ ಏಪ್ರಿಲ್ 1 ರಂದು ಕೇರನ್ ವಲಯದಿಂದ ನುಸುಳಿದ್ದ ಐವರು ಭಯೋತ್ಪಾದಕರನ್ನು ಭಾರತೀಯ ಸೇನೆಯು ಕೊಂದಿತ್ತು.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಇಡೀ ಜಗತ್ತು ನಿರತರಾಗಿರುವ ಸಮಯದಲ್ಲಿ ಪಾಕಿಸ್ತಾನ ಸೇನೆಯು ಆಗಾಗ್ಗೆ ಕದನ ವಿರಾಮ ಉಲ್ಲಂಘನೆ ನಡೆಯುತ್ತಿದೆ.