ಹೊಸದಿಲ್ಲಿ: ಮನೆಯಲ್ಲೇ ಕುಳಿತು ಆ್ಯಪ್ ಮೂಲಕ ಆರ್ಡರ್ ಮಾಡಿದ್ರೆ ಸಾಕು, ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೇ ಆಹಾರದ ಪೊಟ್ಟಣ ಬರುತ್ತದೆ. ಹಲವಾರು ಕಂಪನಿಗಳು ಹಾಗೂ ಸ್ಥಳೀಯ ಹೋಟೆಲ್ನವರು ಬೇಕೆಂದಾಗ ಮನೆ ಬಾಗಿಲಿಗೆ ಫುಡ್ ಡೆಲಿವರಿ ಮಾಡುತ್ತಾರೆ.
ಕೊರೊನಾ ವೈರಸ್ ವೇಗವಾಗಿ ಹರಡುತ್ತಿರುವ ಸಮಯದಲ್ಲಿ ಮನೆಗೇ ಆಹಾರ ತರಿಸುವುದು ಸುರಕ್ಷಿತ ಎಂಬ ಭಾವನೆ ನಿಮ್ಮಲ್ಲಿ ಮೂಡಿದ್ದರೆ ಆಶ್ಚರ್ಯವಿಲ್ಲ. ಆದರೆ ದೆಹಲಿಯಲ್ಲಿ ಪಿಜ್ಜಾ ಡೆಲಿವರಿ ಮಾಡುವ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿರುವುದು ಎಲ್ಲರ ನಿದ್ದೆಗೆಡಿಸಿದೆ. ಆನ್ಲೈನ್ ಮೂಲಕ ಊಟ, ತಿಂಡಿ ತರಿಸುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಈಗ ಮೂಡುವಂತಾಗಿದೆ.
ದೆಹಲಿ ದಕ್ಷಿಣ ಜಿಲ್ಲೆಯ ಪ್ರದೇಶವೊಂದರ ಪಿಜ್ಜಾ ಡೆಲಿವರಿ ವ್ಯಕ್ತಿಯ ವರದಿ ಕೊರೊನಾ ಪಾಸಿಟಿವ್ ಬಂದಿದ್ದು, ರೆಸ್ಟೋರೆಂಟ್ನಿಂದ ಆಹಾರ ತರಿಸಿಕೊಂಡಿದ್ದ 72 ಮನೆಗಳ ಜನರನ್ನು ಕ್ವಾರಂಟೈನ್ನಲ್ಲಿರಿಸಿರುವುದು ಎಚ್ಚರಿಕೆಯ ಗಂಟೆಯಾಗಿದೆ. ವ್ಯಕ್ತಿ ಕೆಲಸ ಮಾಡುತ್ತಿದ್ದ ಸ್ಟಾರ್ಟ್ಅಪ್ ಕಂಪನಿ ಬಾಕ್ಸ್ 8 ತನ್ನ ಉದ್ಯೋಗಿಗೆ ಕೊರೊನಾ ಸೋಂಕು ತಗುಲಿರುವುದನ್ನು ಒಪ್ಪಿಕೊಂಡಿದೆ. "ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ನಾವು ಅಳವಡಿಸಿಕೊಂಡಿದ್ದರೂ ದಕ್ಷಿಣ ದೆಹಲಿಯ ಮಾಳವೀಯ ನಗರದ ನಮ್ಮ ಕಿಚನ್ನಲ್ಲಿ ಕೆಲಸ ಮಾಡುತ್ತಿದ್ದ ಡೆಲಿವರಿ ಪಾರ್ಟನರ್ ಕೊರೊನಾ ಪಾಸಿಟಿವ್ ಆಗಿರುವುದು ದುಃಖದ ಸಂಗತಿಯಾಗಿದೆ." ಎಂದು ಕಂಪನಿ ಹೇಳಿಕೊಂಡಿದೆ.
ಬಾಕ್ಸ್ 8 ಹೋಟೆಲ್ನ ಆನ್ಲೈನ್ ಆರ್ಡರ್ ತೆಗೆದುಕೊಂಡು ಡೆಲಿವರಿ ಮಾಡುವ ಜೊಮ್ಯಾಟೊ, ತನ್ನ ಪಾರ್ಟನರ್ ರೆಸ್ಟೋರೆಂಟ್ ಒಂದರ ಡೆಲಿವರಿ ಬಾಯ್ಗೆ ಕೊರೊನಾ ಸೋಂಕು ತಗುಲಿದ್ದನ್ನು ಖಚಿತಪಡಿಸಿದೆ. ಆದರೆ ರೆಸ್ಟೋರೆಂಟ್ ಹೆಸರನ್ನು ಮಾತ್ರ ಜೊಮ್ಯಾಟೊ ಪ್ರಸ್ತಾಪಿಸಿಲ್ಲ. ಈಗಾಗಲೇ ಎಲ್ಲಾ ಗ್ರಾಹಕರನ್ನು ಸಂಪರ್ಕಿಸಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ರೆಸ್ಟೋರೆಂಟ್ ಮುಚ್ಚಲಾಗಿದೆ ಎಂದು ಜೊಮ್ಯಾಟೊ ಹೇಳಿದೆ.
ಡೆಲಿವರಿ ಬಾಯ್ ಜೊತೆ ಕೆಲಸ ಮಾಡುತ್ತಿದ್ದ ಎಲ್ಲಾ 16 ಸಹೋದ್ಯೋಗಿಗಳನ್ನು ಕ್ವಾರಂಟೈನ್ ಮಾಡಲಾಗಿದ್ದು, ಇಲ್ಲಿಂದ ಯಾವ್ಯಾವ ಮನೆಗಳಿಗೆ ಆಹಾರ ಪೂರೈಸಲಾಗಿದೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಈ ರೆಸ್ಟೋರೆಂಟ್ನಿಂದ 72 ಮನೆಗಳಿಗೆ ಆಹಾರ ಪೂರೈಸಿರುವ ಕುರಿತು ತಿಳಿದು ಬಂದಿದ್ದು, ಆ ಎಲ್ಲಾ ಮನೆಗಳ ಸದಸ್ಯರಿಗೆ ಸ್ವಯಂ ನಿಬಂಧನೆ ವಿಧಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಬಿ.ಎಂ.ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದರು.