ಅಮರಾವತಿ (ಆಂಧ್ರ ಪ್ರದೇಶ): ಆಂಧ್ರಪ್ರದೇಶ ಸರ್ಕಾರವು 2020-21ರ ಹಣಕಾಸು ವರ್ಷಕ್ಕೆ 2.24 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸಿದೆ. ಇದು ಕಳೆದ ವರ್ಷಕ್ಕಿಂತ ಶೇ 1.4ರಷ್ಟು ಕಡಿಮೆಯಾಗಿದೆ.
ಅಂದಾಜು ಆದಾಯ ಕೊರತೆ 18,434 ಕೋಟಿ ರೂ. ಮತ್ತು ಹಣಕಾಸಿನ ಕೊರತೆಯು 48,295 ಕೋಟಿ ರೂ. ಆಗಿದೆ.
ಸಂಕ್ಷಿಪ್ತ ಬಜೆಟ್ ಅಧಿವೇಶನದ ಮೊದಲ ದಿನದಂದು ಹಣಕಾಸು ಸಚಿವ ಬುಗ್ಗನಾ ರಾಜೇಂದ್ರನಾಥ್ ಅವರು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದರು. ಕೋವಿಡ್-19 ಸಮಯದಲ್ಲಿ ಆರ್ಥಿಕ ಕುಸಿತದ ಕಾರಣ ಬಜೆಟ್ ಅಂದಾಜು 1.4ರಷ್ಟು ಕಡಿಮೆಯಾಗಿದೆ ಎಂದರು.
2020ರ ಮಾರ್ಚ್ ಅಂತ್ಯದ ವೇಳೆಗೆ ರಾಜ್ಯದ ಸಾಲದ ಹೊರೆ 3.02 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು, ಇದು ಒಂದು ವರ್ಷದ ಹಿಂದೆ 2.59 ಲಕ್ಷ ಕೋಟಿ ರೂ. ಇತ್ತು. 2020-21ರ ಆರ್ಥಿಕ ವರ್ಷದಲ್ಲಿ ರಾಜ್ಯದ ಸಾಲವು 3.48 ಲಕ್ಷ ಕೋಟಿ ರೂ.ಗಳಷ್ಟಾಗುತ್ತದೆ ಎಂದು ಅಂದಾಜಿಸಲಾಗಿದೆ.