ಮುಂಬೈ : ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಾಲಿವುಡ್ ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರು ನಟಿ ಪಾಯಲ್ ಘೋಷ್ ಮಾಡಿರುವ ಮೀಟೂ ಆರೋಪವನ್ನು ತೀವ್ರವಾಗಿ ನಿರಾಕರಿಸಿದ್ದಾರೆ. ನಟಿ ಪಾಯಲ್ ಘೋಷ್ ನ್ಯಾಯ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ, ನಟಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಕೋರಿರುವುದಾಗಿ ಕಶ್ಯಪ್ ಅವರ ಪರ ವಕೀಲರು ಶುಕ್ರವಾರ ತಿಳಿಸಿದ್ದಾರೆ.
ಅನುರಾಗ್ ಕಶ್ಯಪ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಟಿ ಪಾಯಲ್ ಘೋಷ್ ಕಳೆದ ತಿಂಗಳು ಎಫ್ಐಆರ್ ದಾಖಲಿಸಿದ್ದರು. ದೂರು ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಕಶ್ಯಪ್ರಿಗೆ ನೋಟಿಸ್ ನೀಡಿದ್ದರು. ಅದರಂತೆ ನಿನ್ನೆ ಮುಂಬೈನ ವರ್ಸೋವಾ ಪೊಲೀಸ್ ಠಾಣೆಗೆ ತೆರಳಿ ನೋಟಿಸ್ಗೆ ಉತ್ತರ ನೀಡಿದ್ದಾರೆ ಎಂದು ಕಶ್ಯಪ್ ಅವರ ವಕೀಲ ಪ್ರಿಯಾಂಕಾ ಖಿಮಣಿ ತಿಳಿಸಿದ್ದಾರೆ.
ಅವರ ಆರೋಪವನ್ನು ತೀವ್ರವಾಗಿ ನಿರಾಕರಿಸಿರುವ ಅನುರಾಗ್ ಕಶ್ಯಪ್, ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಪಾಯಾಲ್ ಘೋಷ್ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿದ್ದಾರೆ. ತನ್ನ ಬಾಹ್ಯ ಉದ್ದೇಶಗಳಿಗಾಗಿ ಮೀಟೂ ಚಳವಳಿ ದಾರಿ ತಪ್ಪಿಸುತ್ತಿದ್ದಾರೆ. ನ್ಯಾಯ ಯಾವಾಗಲೂ ಮೇಲುಗೈ ಸಾಧಿಸುತ್ತದೆ ಎಂದು ಅವರು ನಂಬಿರುವುದಾಗಿ ಕಶ್ಯಪ್ ಅವರ ವಕೀಲ ಪ್ರಿಯಾಂಕಾ ಖಿಮಣಿ ಹೇಳಿದ್ದಾರೆ.
ಪೊಲೀಸರು ಪ್ರಕರಣದ ಸಂಬಂಧ ವೈದ್ಯಕೀಯ ಪರೀಕ್ಷೆಗಾಗಿ ಪಾಯಲ್ ಘೋಷ್ ಅವರನ್ನು ಮುಂಬೈನ ಅಂಧೇರಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 2014ರಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಕಶ್ಯಪ್ ಅವರ ಮನೆಗೆ ಹೋದಾಗ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು ಎಂದು ಪಾಯಲ್ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಅದರಂತೆ ಅನುರಾಗ್ ಕಶ್ಯಪ್ ನಿನ್ನೆ ವಿಚಾರಣೆಗೆ ಹಾಜರಾಗಿದ್ದರು.