ಕೋಲ್ಕತ್ತಾ: ಪಶ್ಚಿಮ ಬಂಗಾಳ ಮಂತ್ರಿಮಂಡಲ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದೆ. ಕೇರಳ, ಪಂಜಾಬ್ ಮತ್ತು ರಾಜಸ್ಥಾನದ ನಂತರ ಸಿಎಎ ವಿರುದ್ಧ ನಿರ್ಣಯವನ್ನು ಮಂಡಿಸಿದ ನಾಲ್ಕನೇ ರಾಜ್ಯವಾಗಿ ಪಶ್ಚಿಮ ಬಂಗಾಳ ಸೇರ್ಪಡೆಗೊಂಡಿದೆ.
ಮಮತಾ ನ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅಲ್ಲಿನ ವಿಧಾನಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಕೇಂದ್ರ ಸರ್ಕಾರದ ವಿವಾದಾತ್ಮಕ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದೆ. ಹೀಗಾಗಿ ವಿವಾದಾತ್ಮಕ ಪೌರತ್ವ ಕಾನೂನನ್ನು ಕೂಡಲೇ ರದ್ದುಪಡಿಸಬೇಕು ಮತ್ತು ಎನ್‌ಪಿಆರ್ ಮತ್ತು ಉದ್ದೇಶಿತ ಎನ್‌ಆರ್‌ಸಿ ಹಿಂಪಡೆಯಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರವನ್ನು ಪರೋಕ್ಷವಾಗಿ ಒತ್ತಾಯಿಸಿದೆ. ತೃಣಮೂಲ ಕಾಂಗ್ರೆಸ್ನ ನಿರ್ಣಯವನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಸಿಪಿಐ (ಎಂ) ನೇತೃತ್ವದ ಎಡಪಕ್ಷಗಳೂ ಕೂಡಾ ಬೆಂಬಲಿಸಿವೆ.
ಈ ಕುರಿತು ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ''ಸಿಎಎ ಸಂವಿಧಾನ ಮತ್ತು ಮಾನವೀಯತೆಗೆ ವಿರುದ್ಧವಾಗಿದೆ. ಈ ಕಾನೂನನ್ನು ತಕ್ಷಣವೇ ರದ್ದುಮಾಡಬೇಕು ಜೊತೆಗೆ ಎನ್‌ಪಿಆರ್ ಅನ್ನು ಕೂಡಾ ಹಿಂತೆಗೆದುಕೊಳ್ಳಬೇಕು'' ಎಂದು ಆಗ್ರಹಿಸಿದರು. 2019ರ ಸೆಪ್ಟೆಂಬರ್ನಲ್ಲಿ ಎನ್‌ಆರ್‌ಸಿ ವಿರುದ್ಧವಾಗಿ ಅಲ್ಲಿನ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು.
ಈ ಮೊದಲು ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ, ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ ಅಮರೀಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ ಸಿಎಎ ವಿರುದ್ಧದ ನಿರ್ಣಯವನ್ನು ಅಂಗೀಕರಿಸಿದ್ದವು. ಈಗ ಪಶ್ಚಿಮ ಬಂಗಾಳ ಕೂಡಾ ಸೇರ್ಪಡೆಗೊಂಡಿದೆ