ಅನಂತಪುರ(ಆಂಧ್ರಪ್ರದೇಶ) : ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಅನಂತಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ಅನಂತಪುರ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ರೋಗಿ ದಾಖಲಾದ ನಂತರ, ರೋಗಿಯನ್ನು ವೈದ್ಯರು ಪರೀಕ್ಷೆ ಮಾಡಬೇಕು. ಆದರೆ, ಈ ಆಸ್ಪತ್ರೆಯ ವೈದ್ಯರಾಗಲಿ ಅಥವಾ ಸಿಬ್ಬಂದಿಯಾಗಲಿ ಕನಿಷ್ಠ ಪಕ್ಷ ವಾರ್ಡ್‌ಗೆ ಬಂದು ರೋಗಿಯನ್ನು ನೋಡಲೂ ಇಲ್ಲ. ಹೀಗಾಗಿ ವೈದ್ಯರ ದಿವ್ಯ ನಿರ್ಲಕ್ಷ್ಯದಿಂದ ರೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಅನಂತಪುರ ಜಿಲ್ಲೆಯ ಧರ್ಮಾವರಂನ ರಾಜ ಎಂಬ ವ್ಯಕ್ತಿ ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದ. ಆತನ ಪತ್ನಿ ಮತ್ತು ಗರ್ಭಿಣಿ ಮಗಳು ಆತನನ್ನು ಅನಂತಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ, ವೈದ್ಯರು ರೋಗಿ ಬಗ್ಗೆ ಗಮನ ಹರಿಸಲಿಲ್ಲ. ಹೀಗಾಗಿ ಅವರ ನಿರ್ಲಕ್ಷ್ಯದಿಂದ ರೋಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ವೈದ್ಯರ ನಿರ್ಲಕ್ಷ್ಯಕ್ಕೆ ಪತಿಯನ್ನು ಕಳೆದುಕೊಂಡ ಪತ್ನಿಯ ರೋಧನೆ ಮುಗಿಲು ಮುಟ್ಟಿತ್ತು. ಇನ್ನೊಂದೆಡೆ ಅಪ್ಪನನ್ನು ಕಳೆದುಕೊಂಡ ಗರ್ಭಿಣಿ ಮಗಳು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಇಂತಹ ಪ್ರಕರಣ ಈ ಹಿಂದೆಯೂ ಹಲವು ಬಾರಿ ನಡೆದಿತ್ತಂತೆ. ಈ ಬಗ್ಗೆ ಹಲವು ಬಾರಿ ದೂರುಗಳಾಗಿದ್ದರೂ, ಅಲ್ಲಿನ ಪರಿಸ್ಥಿತಿ ಇನ್ನೂ ಬದಲಾಗಿಲ್ಲ ಎನ್ನುತ್ತಾರೆ ರೋಗಿಗಳು ಹಾಗೂ ಸ್ಥಳೀಯರು.