ಎಲೂರು(ಆಂಧ್ರಪ್ರದೇಶ): ಕಳೆದ ಕೆಲ ದಿನಗಳ ಹಿಂದೆಯಷ್ಟೆ ನಿರುದ್ಯೋಗಿ ಯುವಕರಿಗೆ ಬಂಪರ್ ಉಡುಗೊರೆ ನೀಡಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆಟೋ ಕ್ಯಾಬ್ ಚಾಲಕರಿಗೂ ದಸರಾ ಉಡುಗೊರೆ ನೀಡಿದ್ದಾರೆ.
ಆಟೋ ಮತ್ತು ಕ್ಯಾಬ್ ಚಾಲಕರಿಗೆ ವೈಎಸ್ಆರ್ ವಾಹನ ಮಿತ್ರ ಎಂಬ ನೂತನ ಯೋಜನೆಯನ್ನ ಘೋಷಣೆ ಮಾಡಿದ್ದಾರೆ. ಈ ಯೋಜನೆ ಮೂಲಕ ಪ್ರತಿಯೊಬ್ಬ ಆಟೋ, ಕ್ಯಾಬ್ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಪ್ರತೀ ವರ್ಷ 10 ಸಾವಿರ ಸಹಾಯಧನ ನೀಡಲಾಗುತ್ತದೆ.
ಇನ್ಷುರೆನ್ಸ್, ವಾಹನ ರಿಪೇರಿ ಸೇರಿದಂತೆ ತಮ್ಮ ವಾಹನ ನಿರ್ವಹಣೆಗೆ ಈ ಹಣವನ್ನ ಬಳಸಿಕೊಳ್ಳಬಹುದು ಎಂದಿದ್ದಾರೆ. ಪ್ರತಿಯೊಬ್ಬ ಚಾಲಕರ ಬ್ಯಾಂಕ್ ಕಾತೆಗೆ ನೇರವಾಗಿ ಹಣ ಜಮಾವಣೆ ಮಾಡಲಾಗುವುದು ಎಂದು ಜಗನ್ ಘೋಷಣೆ ಮಾಡಿದ್ದಾರೆ.
ಆಟೋ ಮತ್ತು ಕ್ಯಾಬ್ ಚಾಲಕರ ಕಷ್ಟವನ್ನ ನಾನು ಕಣ್ಣಾರೆ ಕಂಡಿದ್ದೇನೆ. ಪ್ರತಿ ದಿನ 200 ರಿಂದ 500 ರೂಪಾಯಿ ಹಣ ಸಂಪಾದನೆ ಮಾಡುವ ಚಾಲಕರಿಗೆ ಸಂಸಾರ ನಿಭಾಯಿಸುವುದು ತುಂಬಾ ಕಷ್ಟ. ಹೀಗಾಗಿ 5 ವರ್ಷದಲ್ಲಿ 50 ಸಾವಿರ ಹಣವನ್ನ ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತದೆ. ಇಂತಹ ಯೋಜನೆ ಘೋಷಣೆ ಮಾಡಿರುವ ಏಕೈಕ ರಾಜ್ಯ ಆಂಧ್ರಪ್ರದೇಶ ಎಂದು ಜಗನ್ ಹರ್ಷ ವ್ಯಕ್ತಪಡಿಸಿದ್ದಾರೆ.