ಹೈದರಾಬಾದ್: ಕೊರೊನಾ ಪರಿಸ್ಥಿತಿಯನ್ನು ಆಂಧ್ರ ಪ್ರದೇಶ ಸರ್ಕಾರ ರಾಜಕೀಯಗೊಳಿಸುತ್ತಿದೆ ಎಂದು ಜನಸೇನಾ ಪಕ್ಷದ (ಜೆಎಸ್‌ಪಿ) ಅಧ್ಯಕ್ಷ ಪವನ್ ಕಲ್ಯಾಣ್ ಆರೋಪಿಸಿದ್ದಾರೆ.
ಪಕ್ಷದ ಮುಖಂಡರು ಮತ್ತು ಮಹಿಳಾ ವಿಭಾಗದ ಸದಸ್ಯರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ ಕಲ್ಯಾಣ್, ಈ ದುರಂತ ಸಂದರ್ಭದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸರ್ಕಾರ ಎಡವಿದೆ. ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಲ್ಲ. ಈ ಸಂದರ್ಭವನ್ನು ರಾಜಕೀಯಗೊಳಿಸಬಾರದು ಎಂದು ನಾವು ಆರಂಭದಿಂದಲೂ ಸರ್ಕಾರಕ್ಕೆ ಹೇಳುತ್ತಿದ್ದೇವೆ. ಸರ್ಕಾರ ಇದನ್ನು ಜನರ ವೈಯುಕ್ತಿಕ ಸಮಸ್ಯೆ ಎಂದು ಭಾವಿಸಬಾರದು ಎಂದಿದ್ದಾರೆ.
ಪ್ರಸ್ತುತ ಕೊರೊನಾ ಪರಿಸ್ಥಿತಿ, ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಮತ್ತು ಲಾಕ್ಡೌನ್ನಿಂದ ಸಣ್ಣ ವ್ಯಾಪಾರಿಗಳು ಮತ್ತು ಕೂಲಿ ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪಕ್ಷದ ಮುಖಂಡರೊಂದಿಗೆ ಕಲ್ಯಾಣ್ ಚರ್ಚಿಸಿದರು. ಅಲ್ಲದೆ, ತಮ್ಮ ಪಕ್ಷದಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶೀಘ್ರದಲ್ಲಿ ತಿಳಿಸುವುದಾಗಿ ಹೇಳಿದರು.