ಅಮರಾವತಿ(ಆಂಧ್ರಪ್ರದೇಶ): ಸೆಪ್ಟೆಂಬರ್ 5 ರಿಂದ ಶಾಲೆಗಳನ್ನು ಪುನಾರಂಭಿಸಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ. ಆದರೆ ದಿನಾಂಕ ಸಮೀಪಿಸಿದಾಗ ಪರಿಸ್ಥಿತಿಯನ್ನು ಆಧರಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ.
ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ನಡೆದ ಶಿಕ್ಷಣ ಪರಿಶೀಲನಾ ಸಭೆಯ ನಂತರ ಮಾತನಾಡಿದ ಶಿಕ್ಷಣ ಸಚಿವ ಆದಿಮುಲಾಪು ಸುರೇಶ್, ಸೆಪ್ಟೆಂಬರ್ 5 ರಿಂದ ಶಾಲೆಗಳನ್ನು ಪುನಾರಂಭಿಸಲು ಸರ್ಕಾರ ದಿನಾಂಕ ನಿಗದಿಪಡಿಸಿದ್ದರೂ, ಆ ಸಂದರ್ಭದಲ್ಲಿನ ಪರಿಸ್ಥಿತಿ ಆಧರಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಶಾಲೆಗಳು ಪುನಾರಂಭವಾದರೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಬದಲು ಆಹಾರ ಸಾಮಗ್ರಿಯನ್ನು ಅವರ ಮನೆಗೆ ಪೂರೈಸಲಾಗುವುದು ಎಂದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ (ಎಲ್‌ಕೆಜಿ ಮತ್ತು ಯುಕೆಜಿ) ಪ್ರಾರಂಭಿಸಲಾಗುವುದು ಮತ್ತು ಸರ್ಕಾರಿ ಜೂನಿಯರ್ ಕಾಲೇಜುಗಳಲ್ಲಿ ಎಪಿ ಇಎಂಸಿಇಟಿ, ಜೆಇಇ, ಐಐಐಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು. ಅಲ್ಲದೆ, ಶಿಕ್ಷಣದ ಗುಣಮಟ್ಟ ಸುಧಾರಿಸಲು ಜಿಲ್ಲಾ ಮಟ್ಟದಲ್ಲಿ ಜಂಟಿ ನಿರ್ದೇಶಕ ಹುದ್ದೆಯನ್ನು ರಚಿಸಲಾಗುವುದು ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಸರಿಯಾಗಿ ಅನುಷ್ಠಾನಗೊಳಿಸಲು ಮತ್ತು ಜಗನ್ ಅಣ್ಣ ಗೋರುಮುದ್ದಾ (ಮಧ್ಯಾಹ್ನ ಬಿಸಿಯೂಟ) ಯೋಜನೆಗೆ ರಾಜ್ಯಮಟ್ಟದಲ್ಲಿ ಎರಡು ನಿರ್ದೇಶಕ ಹುದ್ದೆಗಳನ್ನು ರಚಿಸಲು ಮತ್ತು ಪ್ರತಿ ತಾಲೂಕಿನಲ್ಲೂ ಸರ್ಕಾರಿ ಜೂನಿಯರ್ ಕಾಲೇಜು ಸ್ಥಾಪಿಸಲು ಮುಖ್ಯಮಂತ್ರಿ ಆದೇಶಿಸಿದ್ದಾರೆ ಎಂದು ಸಚಿವ ಸುರೇಶ್ ತಿಳಿಸಿದರು.