ಪೇಶಾವರ: ವಾಯುವ್ಯ ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಪರ್ವತವೊಂದರಲ್ಲಿ 1,300 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಹಿಂದೂ ದೇವಾಲಯವನ್ನು ಪಾಕಿಸ್ತಾನ ಮತ್ತು ಇಟಾಲಿಯನ್ ಪುರಾತತ್ವ ತಜ್ಞರು ಪತ್ತೆ ಮಾಡಿದ್ದಾರೆ.
ಗುರುವಾರ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಇದು ವಿಷ್ಣುವಿನ ದೇವಾಲಯವಾಗಿದೆಯೆಂದು ಖೈಬರ್ ಪಖ್ತುನ್ಖ್ವಾ ಪುರಾತತ್ವ ವಿಭಾಗದ ಫಝೆಲ್ ಖಲಿಕ್ ತಿಳಿಸಿದ್ದಾರೆ. ಬ್ಯಾರಿಕೋಟ್ ಘುಂಡೈನಲ್ಲಿ ಉತ್ಖನನ ನಡೆಸುವ ವೇಳೆ ಈ ಆವಿಷ್ಕಾರ ಮಾಡಲಾಗಿದೆ. ದೇವಾಲಯವನಮ್ನು ಹಿಂದೂ ಶಾಹಿ ಅವಧಿಯಲ್ಲಿ 1,300 ವರ್ಷಗಳ ಹಿಂದೆ ಹಿಂದೂಗಳು ನಿರ್ಮಿಸಿರಬಹುದೆಂದು ಮಾಹಿತಿ ನೀಡಿದ್ದಾರೆ.
ಹಿಂದೂ ಶಾಹಿಸ್ ಅಥವಾ ಕಾಬೂಲ್ ಶಾಹಿಸ್ (ಕ್ರಿ.ಶ. 850-1026) ಎಂಬುದು ಹಿಂದೂ ರಾಜವಂಶವಾಗಿದೆ. ಇದು ಕಾಬೂಲ್ ಕಣಿವೆ (ಪೂರ್ವ ಅಫ್ಘಾನಿಸ್ತಾನ), ಗಾಂಧಾರ (ಆಧುನಿಕ-ದಿನದ ಪಾಕಿಸ್ತಾನ) ಮತ್ತು ಇಂದಿನ ವಾಯುವ್ಯ ಭಾರತವನ್ನು ಆಳಿದ್ದು, ಆ ಸಂದರ್ಭದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ ಎಂದು ಅಂದಾಜಿಸಲಾಗಿದೆ.
ಪುರಾತತ್ವ ತಜ್ಞರು ತಮ್ಮ ಉತ್ಖನನದ ಸಮಯದಲ್ಲಿ, ದೇವಾಲಯದ ಬಳಿ ಕಂಟೋನ್ಮೆಂಟ್ ಮತ್ತು ವಾಚ್ ಟವರ್‌ಗಳ ಕುರುಹುಗಳನ್ನು ಸಹ ಕಂಡುಕೊಂಡಿದ್ದಾರೆ. ಜೊತೆಗೆ ಹಿಂದೂಗಳು ಪೂಜೆಗೆ ಮೊದಲು ಸ್ನಾನ ಮಾಡಲು ಬಳಸುತ್ತಿದ್ದ ನೀರಿನ ತೊಟ್ಟಿಗಳು ಸಹ ಸಿಕ್ಕಿವೆ. ಸ್ವಾತ್ ಜಿಲ್ಲೆಯು ಸಾವಿರ ವರ್ಷಗಳಷ್ಟು ಹಳೆಯದಾದ ಪುರಾತತ್ವ ಸ್ಥಳಗಳಿಗೆ ನೆಲೆಯಾಗಿದೆ ಮತ್ತು ಹಿಂದೂ ಶಾಹಿ ಕಾಲದ ಕುರುಹುಗಳು ಈ ಪ್ರದೇಶದಲ್ಲಿ ಮೊದಲ ಬಾರಿಗೆ ಕಂಡುಬಂದಿವೆ ಎಂದು ಖಲೀಕ್ ತಿಳಿಸಿದರು.
ಸ್ವಾತ್ ಜಿಲ್ಲೆಯಲ್ಲಿ ಪತ್ತೆಯಾದ ಗಾಂಧಾರ ನಾಗರಿಕತೆಯ ಮೊದಲ ದೇವಾಲಯ ಇದಾಗಿದೆ ಎಂದು ಇಟಾಲಿಯನ್ ಪುರಾತತ್ವ ಕಾರ್ಯಾಚರಣೆಯ ಮುಖ್ಯಸ್ಥ ಡಾ. ಲುಕಾ ತಿಳಿಸಿದರು. ನೈಸರ್ಗಿಕ ಸೌಂದರ್ಯ, ಧಾರ್ಮಿಕ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ ಮತ್ತು ಪುರಾತತ್ವ ತಾಣಗಳಂತಹ ಎಲ್ಲಾ ರೀತಿಯ ಪ್ರವಾಸೋದ್ಯಮಗಳಿಗೆ ನೆಲೆಯಾಗಿರುವ ಪಾಕಿಸ್ತಾನದ ಅಗ್ರ 20 ತಾಣಗಳಲ್ಲಿ ಸ್ವಾತ್ ಜಿಲ್ಲೆಯೂ ಸೇರಿದೆ. ಇನ್ನೂ ಬೌದ್ಧ ಧರ್ಮದ ಹಲವಾರು ಪೂಜಾ ಸ್ಥಳಗಳು ಸಹ ಸ್ವಾತ್ ಜಿಲ್ಲೆಯಲ್ಲಿವೆ.