ರಾಮನಾಥಪುರಂ(ತಮಿಳುನಾಡು): ಯುವಕನ ಪ್ರಾಣ ಉಳಿಸಲು ಆ್ಯಂಬುಲೆನ್ಸ್ ಚಾಲಕ ತಮಿಳುನಾಡಿನ ರಾಮನಾಥಪುರಂನಿಂದ ಪುದುಚೇರಿಯ ನಡುವೆ ಇರುವ ಸುಮಾರು 400 ಕಿ ಮೀ ದೂರವನ್ನು ಕೇವಲ ಐದು ಗಂಟೆಗಳಲ್ಲಿ ಕ್ರಮಿಸಿ ಆಸ್ಪತ್ರೆ ತಲುಪಿಸಿದ ಅಪರೂಪದ ಘಟನೆ ನಡೆದಿದೆ.
ತಮಿಳುನಾಡಿನ ರಾಮನಾಥಪುರಂನಲ್ಲಿ ವಾಸವಾಗಿದ್ದ ನೈನಾರ್ ಮೊಹಮ್ಮದ್-ಜೆಸಿಮಾ ದಂಪತಿಯ ಪುತ್ರ ಮೊಹಮ್ಮದ್ ಅಮೀರ್ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದ. ಇದೇ ಕಾರಣಕ್ಕೆ ಮೊಹಮ್ಮದ್ ಅಮೀರ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಈತನನ್ನು ಪುದುಚೇರಿಯ ಜಿಪ್ಮೆರ್ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದ್ದರು.
ಆದರೆ ರಾಮನಾಥಪುರಂ ಹಾಗೂ ಪುದುಚೇರಿ ನಡುವಿನ ಅಂತರ ಸುಮಾರು 400 ಕಿ ಮೀ ಇದ್ದು, ಎಂಟು ಗಂಟೆ ಪ್ರಯಾಣಿಸಬೇಕಿದೆ. ಆದರೆ ಇದೇ ವೇಳೆ ತಮಿಳುನಾಡು ಮುಸ್ಲಿಮ್ ಮುನ್ನೇತ್ರ ಕಳಗಂ ಪಕ್ಷ ಈ ಯುವಕನ ಪಾಲಿಗೆ ಆಶಾಕಿರಣವಾಗಿ ಕಾಣಿಸಿಕೊಂಡಿತು. ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ ರಾಮನಾಥಪುರಂನಿಂದ ಪುದುಚೇರಿಗೆ ಆ್ಯಂಬುಲೆನ್ಸ್ ತೆರಳಲು ಟ್ರಾಫಿಕ್ ಫ್ರೀ ವ್ಯವಸ್ಥೆ ಮಾಡಲಾಯಿತು.
ಆ್ಯಂಬುಲೆನ್ಸ್ ಚಾಲಕ ಮೊಹಮ್ಮದ್ ಇಜಾಜ್ ಕೇವಲ ಐದು ಗಂಟೆಯಲ್ಲಿ ಮೊಹಮ್ಮದ್ ಅಮೀರ್ನನ್ನು ಪುದುಚೇರಿಗೆ ತಲುಪಿಸಿ ಜೀವ ಉಳಿಸಿದ್ದಾನೆ. ಚಾಲಕನ ಸಾಹಸ ಹಾಗೂ ರಾಜಕೀಯ ಪಕ್ಷದ ಮಾನವೀಯ ನಡೆಗೆ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.