ಅಲಿಗಢ (ಉತ್ತರಪ್ರದೇಶ) : ಉತ್ತರಪ್ರದೇಶ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಪ್ರತಿಭಟನೆಗೆ ಸಂಬಂಧಿಸಂತೆ ವಿವಿಧ 10 ಸಾವಿರ ಗುರುತು ಪತ್ತೆಯಾಗದ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ.
ಅಲಿಗಢದಲ್ಲಿ ಸೆಕ್ಷನ್ 144 ಉಲ್ಲಂಘನೆಯ ಪ್ರಕರಣದಲ್ಲಿ ಯುಪಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) ಗುರುತು ಪತ್ತೆಯಾಗದ 10 ಸಾವಿರ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಏನಿದು ಪ್ರಕರಣ?
ಸಿಎಎ ವಿರುದ್ಧ ಪ್ರತಿಭಟಿಸಿದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ಡಿಸೆಂಬರ್ 23 ರಂದು ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಕ್ಯಾಂಡಲ್ ಮೆರವಣಿಗೆ ನಡೆಸಿದ್ದರು. ನಗರದ ಚುಂಗಿ ಗೇಟ್‌ನಿಂದ ಬಾಬೆ ಸಯೀದ್ ಗೇಟ್‌ವರೆಗೆ ಕ್ಯಾಂಡಲ್ ಮೆರವಣಿಗೆಯನ್ನು ನಡೆಸಲಾಯಿತು. ಈ ಪ್ರದರ್ಶನದಲ್ಲಿ ಸಾವಿರಾರು ಎಎಂಯು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಕಾನೂನುಬಾಹಿರವಾಗಿ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ್ದಾರೆ. ಇದಲ್ಲದೇ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಪೊಲೀಸ್ ವಾಹನಗಳನ್ನು ಸುಟ್ಟು ಹಾಕಿದ್ದರು. ಶಾಂತಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪ ಪಡೆಯಿತು. ಸಾರ್ವಜನಿಕ ಆಸ್ತಿ - ಪಾಸ್ತಿ ನಷ್ಟವಾಯಿತು. ನಗರದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಜನರು ಮೆರವಣಿಗೆಯನ್ನು ಕೈಗೊಳ್ಳುವ ಮೂಲಕ ಸೆಕ್ಷನ್ 144 ಅನ್ನು ಉಲ್ಲಂಘಿಸಿದ್ದರು. ಹೀಗಾಗಿ ಗುರುತು ಪತ್ತೆಯಾಗದ 10 ಸಾವಿರ ವಿದ್ಯಾರ್ಥಿಗಳ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.