ಅಲಿಗರ್ (ಉತ್ತರ ಪ್ರದೇಶ): ಜಿಲ್ಲೆಯಲ್ಲಿ ಕೊರೊನಾಗೆ ಮೊದಲ ಸಾವು ಸಂಭವಿಸಲು ವೈದ್ಯಕೀಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಅಲಿಗರ್ ಜಿಲ್ಲಾಡಳಿತ, ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದ (AMU) ಜವಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿನ ವೈದ್ಯನನ್ನು ಅಮಾನತುಗೊಳಿಸಿದೆ.
ಮೆರಾಜುದ್ದೀನ್ (55) ಮೃತ ರೋಗಿ. ಏ.19 ರಂದು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಮೆರಾಜುದ್ದೀನ್ನನ್ನು ಮೊದಲು ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಿ ಬಳಿಕ ವೆಂಟಿಲೇಟರ್ನಲ್ಲಿರಿಸಲಾಗಿದೆ. ಈ ಕುರಿತು ಮೆಡಿಕಲ್ ಕಾಲೇಜು ಅಧಿಕಾರಿಗಳು ಜಿಲ್ಲಾ ಆರೋಗ್ಯ ಇಲಾಖೆಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಏ.20 ರಂದು ರೋಗಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ವಿಷಯ ತಿಳಿಸಲು ವಿಳಂಬ ಮಾಡಿದ ಕಾರಣ ರೋಗಿಗೆ ಸಮಯಕ್ಕೆ ಸರಿಯಾದ ಸೂಕ್ತ ಚಿಕಿತ್ಸೆ ದೊರೆತಿಲ್ಲ ಹಾಗೂ ಇತರರಿಗೆ ಸೋಂಕು ಹರಡುವಂತಾಯಿತು ಎಂದು ಅಲಿಗರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರ ಭೂಷಣ್ ಆರೋಪಿಸಿದ್ದಾರೆ.
ರೋಗಿಯ ಮಾಹಿತಿಯನ್ನು ನಮ್ಮಿಂದ ಮರೆಮಾಚಿದ್ದಲ್ಲದೇ, ರೋಗಿಯನ್ನು ಎಕ್ಸ್-ರೇ ಗಾಗಿ ಬೇರೊಂದು ನರ್ಸಿಂಗ್ ಹೋಂಗೆ ಕಳುಹಿಸಲಾಗಿದೆ. ಕೋವಿಡ್-19 ಪ್ರೋಟೋಕಾಲ್ ಅನುಸರಿಸದ ಕಾರಣ AMU ಪ್ರಾಧ್ಯಾಪಕ ಡಾ.ಅಂಜುಮ್ ಚುಗ್ತೈ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಚಂದ್ರ ಭೂಷಣ್ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಲಾಕ್ಡೌನ್ ನಿಯಮ ಉಲ್ಲಂಘಿಸಿದ ಆರೋಪದಡಿ ಹಾಗೂ ಸಾಂಕ್ರಾಮಿಕ ರೋಗ ಕಾಯ್ದೆಯಡಿ ಮೃತ ರೋಗಿ ಮೆರಾಜುದ್ದೀನ್ನ ಕುಟುಂಬಸ್ಥರ ವಿರುದ್ಧ ಕೂಡ ಪ್ರಕರಣ ದಾಖಲಾಗಿದೆ. ಸದ್ಯ ಇವರನ್ನೆಲ್ಲ ಕ್ವಾರಂಟೈನ್ನಲ್ಲಿರಿಸಲಾಗಿದ್ದು, ಇವರ ರಕ್ತದ ಮಾದರಿಯನ್ನು ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಅಲಿಗರ್ ಅಪರಾಧ ವಿಭಾಗ ಎಎಸ್ಪಿ ಡಾ.ಅರವಿಂದ್ ಕುಮಾರ್ ತಿಳಿಸಿದ್ದಾರೆ.