ಚೆನ್ನೈ: ನಗರದ ಮನಾಲಿ ಬಳಿ ಸಂಗ್ರಹಿಸಿಟ್ಟಿದ್ದ ಅಮೋನಿಯಂ ನೈಟ್ರೇಟ್ ಪೈಕಿ ಎರಡನೇ ಹಂತವಾಗಿ 229 ಟನ್ ಹೈದರಾಬಾದ್ಗೆ ಸ್ಥಳಾಂತರಿಸಲಾಗಿದೆ. ಉಳಿದಿರುವುದನ್ನು ಒಂದು ವಾರದೊಳಗೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ಕರುರು ಜಿಲ್ಲೆಯ ಖಾಸಗಿ ಕಂಪನಿಯೊಂದು 2015 ರಲ್ಲಿ ದಕ್ಷಿಣ ಕೊರಿಯಾದಿಂದ 740 ಟನ್ ಅಮೋನಿಯಂ ನೈಟ್ರೇಟ್ನ್ನು ಆಮದು ಮಾಡಿಕೊಂಡಿತ್ತು. ಇದರಲ್ಲಿ ಅಕ್ರಮ ನಡೆದಿರುವುದು ಕಂಡು ಬಂದ ಹಿನ್ನೆಲೆ, ಕಸ್ಟಮ್ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡು ಮನಾಲಿಯ ರಾಸಾಯನಿಕ ಗೋದಾಮಿನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಟ್ಟಿದ್ದರು. ಮಳೆ ಪ್ರವಾಹ ಮತ್ತು ಆವಿಯಾಗಿ 740 ಟನ್ ಇದ್ದ ಅಮೋನಿಯಂ ನೈಟ್ರೇಟ್ 43 ಟನ್ ಕಡಿಮೆಯಾಗಿದೆ. ಪ್ರಸ್ತುತ 697 ಟನ್ ಇದೆ. ಇದನ್ನು ಹರಾಜಿನಲ್ಲಿ ಹೈದರಾಬಾದ್ ಮೂಲದ ಕಂಪನಿ ಪಡೆದುಕೊಂಡಿದ್ದು, ಹೀಗಾಗಿ ಹಂತ ಹಂತವಾಗಿ ಸ್ಥಳಾಂತರ ಮಾಡಲಾಗುತ್ತಿದೆ.
ಮೊದಲ ಹಂತದಲ್ಲಿ ಆಗಸ್ಟ್ 9 ರಂದು 10 ಕಂಟೇನ್ರಗಳ ಮೂಲಕ 181 ಟನ್ ಸ್ಥಳಾಂತರ ಮಾಡಲಾಗಿತ್ತು. ಇದೀಗ ಎರಡನೇ ಹಂತದಲ್ಲಿ (ಆಗಸ್ಟ್ 11) 12 ಕಂಟೇನರ್ಗಳ ಮೂಲಕ 229 ಟನ್ ಸ್ಥಳಾಂತರಿಸಲಾಗಿದೆ. ಉಳಿದಿರುವುದನ್ನು ಒಂದೆರಡು ವಾರದೊಳಗೆ ಸ್ಥಳಾಂತರ ಮಾಡಲಾಗುತ್ತದೆ.
ಕಳೆದ ಆಗಸ್ಟ್ 4 ರಂದು ಲೆಬನಾನ್‌ನ ಬೈರುತ್‌ನಲ್ಲಿ ಸ್ಫೋಟ ಸಂಭವಿಸಿ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು ಮತ್ತು ಸಾವಿರಾರು ಜನರು ಗಾಯಗೊಂಡಿದ್ದರು. ಸುಮಾರು 2,700 ಟನ್ ಅಮೋನಿಯಂ ನೈಟ್ರೇಟ್‌ನಿಂದ ಸ್ಫೋಟವೇ ದುರ್ಘಟನೆಗೆ ಕಾರಣವೆಂದು ಲೆಬನಾನ್ ಸರ್ಕಾರ ಹೇಳಿತ್ತು. ಆ ಬಳಿಕ ಚೆನ್ನೈನಲ್ಲಿ ಸಂಗ್ರಹಿಸಿಟ್ಟಿದ್ದ ಅಮೋನಿಯಂ ನೈಟ್ರೇಟ್ ಬಗ್ಗೆ ಜನ ಆತಂಕಿತರಾಗಿದ್ದರು.