ನವದೆಹಲಿ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಸಚಿವಾಲಯ ಮಹಾರಾಷ್ಟ್ರ ಸರ್ಕಾರದಿಂದ ವರದಿ ಕೇಳಿದೆ.
ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಮಾತುಕತೆ ನಡೆಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಕಳೆದ ಶುಕ್ರವಾರ ಜುನಾ ಅಖಾರಾ (ಭಾರತದ ಸಾಧುಗಳ ಅತಿ ದೊಡ್ಡ ಒಕ್ಕೂಟ)ದ ಇಬ್ಬರು ಸಾಧುಗಳಾದ ಸ್ವಾಮೀ ಕಲ್ಪಬ್ರಿಕ್ಸ್ ಗಿರಿ, ಸ್ವಾಮೀ ಸುಶೀಲ್ ಗಿರಿ ಮತ್ತು ಚಾಲಕ ನಿಲೇಶ್ ತೆಲ್ಗೆರೆಯನ್ನು ನೂರಕ್ಕೂ ಅಧಿಕ ಜನರು ಸೇರಿ ಥಳಿಸಿ ಕೊಂದಿದ್ದರು.
ಈ ಭೀಕರ ಘಟನೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯಲ್ಲಿ ಕೋಮು ವಿಷಯಗಳು ಏನೂ ಇಲ್ಲ ಎಂದು ಸಿಎಂ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದ್ದಾರೆ. ಘಟನೆಗೆ ಕೋಮು ಬಣ್ಣ ಬಳಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಘಟನೆಯ ಬಳಿಕ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದ್ದು, ಸಿಐಡಿ ಅಪರಾಧ ದಳದ ಎಡಿಜಿ ಅತುಲ್ ಚಂದ್ರ ಕುಲಕರ್ಣಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಲಾಗಿದೆ. ಇದುವರೆಗೆ 9 ಅಪ್ರಾಪ್ತರು ಸೇರಿ 100 ಜನರನ್ನು ಬಂಧಿಸಲಾಗಿದೆ.