ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಾರ್ಟಿ ಇಂದು ತನ್ನ ಪ್ರಣಾಳಿಕೆ ರಿಲೀಸ್ ಮಾಡಿದೆ. ಇದರ ಬೆನ್ನಲ್ಲೇ ಪಕ್ಷದ ನಾಯಕತ್ವದ ಮೇಲೆ ಮುಣಿಸಿಕೊಂಡಿರುವ ಬಿಜೆಪಿ ಹಿರಿಯ ಮುಖಂಡರಾದ ಎಲ್ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಭೇಟಿ ಮಾಡಿ ಅಮಿತ್ ಶಾ ಮಾತನಾಡಿದ್ದಾರೆ.
ಈಗಾಗಲೇ ಪಕ್ಷದಿಂದ ಅವರನ್ನ ಕಡೆಗಣಿಸಿರುವ ಭಾರತೀಯ ಜನತಾ ಪಾರ್ಟಿ ಈ ಸಲದ ಲೋಕಸಭೆಗೆ ಸ್ಪರ್ಧಿಸಿಲು ಟಿಕೆಟ್ ನೀಡಿಲ್ಲ. ಇದರ ವಿರುದ್ಧ ಈಗಾಗಲೇ ಕಾಂಗ್ರೆಸ್ ಕೂಡ ಬಿಜೆಪಿ ನಿರ್ಧಾರದ ವಿರುದ್ಧ ಕಿಡಿಕಾರಿದೆ. ಅಡ್ವಾಣಿ ಪ್ರತಿನಿಧಿಸುತ್ತಿದ್ದ ಗಾಂಧಿನಗರದಿಂದ ಅಮಿತ್ ಶಾ ಹಾಗೂ ಜೋಶಿ ಕಣಕ್ಕಿಳಿಯುತ್ತಿದ್ದ ಕಾನ್ಪುರ್ದಿಂದ ಸತ್ಯದೇವ್ ಪಚೌರಿ ಸ್ಪರ್ಧೆ ಮಾಡುತ್ತಿದ್ದಾರೆ.
ಪಕ್ಷದ ಸಹ ಸಂಸ್ಥಾಪಕ ಸದಸ್ಯ ಅಡ್ವಾಣಿ ಹಾಗೂ ಮುರುಳಿ ಮನೋಹರ್ ಜೋಶಿ ಅಸಮಾಧಾನಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನ ಅಮಿತ್ ಶಾ ಭೇಟಿ ಮಾಡಿ, ಪಕ್ಷದ ಪ್ರಚಾರಕ್ಕೆ ಕರೆತರುವ ತಂತ್ರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಇಬ್ಬರು ನಾಯಕರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿರುವ ಕಾರಣ, ಪಕ್ಷದ ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡಿ ಮಾತುಕತೆ ನಡೆಸಿದರು ಎಂದು ತಿಳಿದು ಬಂದಿದೆ. ವಿಶೇಷವೆಂದರೆ ಕಳೆದ ಕೆಲ ದಿನಗಳ ಹಿಂದೆ ಅಡ್ವಾಣಿ ತಮ್ಮ ಬ್ಲಾಗ್ನಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಸಮಾಧಾನ ಸಹ ಹೊರಹಾಕಿದ್ದರು.