ನವದೆಹಲಿ: ಕಣಿವೆಯಲ್ಲಿ ತೀವ್ರ ಆತಂಕ ಉದ್ಭವಿಸಿರುವ ಕಾರಣ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.
ಅಜಿತ್ ಧೋವಲ್ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ರಾಜೀವ್ ಗೌಬೆ ಅವರನ್ನು ಭೇಟಿ ಮಾಡಿದ ಶಾ, ಕಾಶ್ಮೀರದ ಸ್ಥಿತಿಗತಿ ಕುರಿತಾಗಿ ಚರ್ಚೆ ನಡೆಸಿದರು. ಕಣಿವೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ನಡೆದ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಸಂವಿಧಾನ 35ಎ ವಿಧಿ ರದ್ದತಿ ವದಂತಿಯಿಂದ ಸಂಭವಿಸಬಹುದಾದ ಗಲಭೆ ಹಾಗೂ ಉಗ್ರರ ಆತಂಕದ ಬಗ್ಗೆ ಗುಪ್ತಚರ ಮಾಹಿತಿ ದೊರೆತ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ಕಾಶ್ಮೀರಕ್ಕೆ ಕಳುಹಿಸಲಾಗಿದೆ. ಇದರ ಬೆನ್ನಲ್ಲೆ, ಉಗ್ರ ದಾಳಿಯ ಭೀತಿಯಲ್ಲಿ ಅಮರನಾಥ ಯಾತ್ರೆಯನ್ನು ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ರದ್ದು ಮಾಡಿದೆ. ನಿನ್ನೆಯಷ್ಟೆ ಭಾರತ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಾಂಬ್ ದಾಳಿ ಮಾಡಿದೆ ಎಂದು ಪಾಕಿಸ್ತಾನ ಹೇಳಿತ್ತು. ಆ ಬಳಿಕ ಗಡಿಯಲ್ಲಿ ಉಭಯ ರಾಷ್ಟ್ರಗಳಿಂದ ಗುಂಡಿನ ಚಕಮಕಿ ನಡೆದಿತ್ತು. ಭಾರತೀಯ ಸೇನೆ, ಪಾಕಿಸ್ತಾನ ಬ್ಯಾಟ್ ಪಡೆಯ 7 ಮಂದಿಯನ್ನು ಹೊಡೆದುರುಳಿಸಿದ್ದು ದೃಢಪಟ್ಟಿದೆ.
ಹೀಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರ ಬೆಳವಣಿಗೆಗಳು ಆಗುತ್ತಲೇ ಇದ್ದು, ಮತ್ತಷ್ಟು ಆತಂಕ ಎದುರಾಗಿದೆ. ಈ ಘಟನೆಗಳ ಬಗ್ಗೆ ಅಮಿತ್ ಶಾ ಚರ್ಚೆ ನಡೆಸಿದ್ದಾರೆ. ಈ ಹಿಂದೆ ನಡೆದ ಸರ್ಜಿಕಲ್ ದಾಳಿಯ ರೂವಾರಿ ಅಜಿತ್ ಧೋವಲ್ ಅವರು ಮತ್ಯಾವ ಸಲಹೆ ನೀಡಿದ್ದಾರೆ ಎಂಬ ಕುತೂಹಲವೂ ಮನೆ ಮಾಡಿದೆ.