ನವದೆಹಲಿ: ಕಳೆದ 14 ವರ್ಷಗಳಿಂದ ಅಟಲ್ ಬಿಹಾರಿ ವಾಜಪೇಯಿ ಅವರ ನಿವಾಸವಾಗಿದ್ದ ಕೃಷ್ಣ ಮೆನನ್ ಮಾರ್ಗದಲ್ಲಿರುವ ವಾಜಪೇಯಿ ಅವರ ನಿವಾಸವನ್ನು ನೂತನ ಗೃಹ ಸಚಿವ ಅಮಿತ್ ಶಾ ಅವರಿಗೆ ನೀಡಲಾಗಿದೆ. ಮಾಜಿ ಪ್ರಧಾನಿ ನಿಧನಾ ನಂತರ ಅವರ ಸಂಬಂಧಿಗಳು ಈ ಬಂಗಲೆಯನ್ನ ತೆರವು ಮಾಡಿದ್ದರು. ತೆರವಾದ ಈ ಬಂಗಲೆಯನ್ನ ಈಗ ಗೃಹ ಸಚಿವ ಅಮಿತ್ ಶಾ ಅವರಿಗೆ ಹಂಚಿಕೆ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಬಳಿಕ ನಂಬರ್-2 ಸ್ಥಾನದಲ್ಲಿರುವ ಅಮಿತ್ ಶಾಗೆ ಪಕ್ಷದ ಸರ್ವೋಚ್ಛ ನಾಯಕರಾಗಿದ್ದ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿವಾಸವನ್ನೇ ನೀಡಲಾಗಿದೆ. ಕೇಂದ್ರ ಗೃಹ ಇಲಾಖೆಯ ಕಚೇರಿಗೆ ಈ ನಿವಾಸ ಹತ್ತಿರದಲ್ಲೇ ಇರುವುದರಿಂದ ಅಮಿತ್ ಶಾಗೆ ಇದೇ ನಿವಾಸವನ್ನ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ.
ಈ ಬಂಗಲೆ ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿದ್ದು, ಸುರಕ್ಷತೆಯ ದೃಷ್ಟಿಯಿಂದಲೂ ಸುರಕ್ಷಿತವಾಗಿದೆ. ಸುಮಾರು ಮೂರು ಎಕರೆಯಷ್ಟು ಪ್ರದೇಶದಲ್ಲಿ ಈ ನಿವಾಸವಿದೆ. 7 ಬೆಡ್ ರೂಂ ಮತ್ತು 2 ಡ್ರಾಯಿಂಗ್ ರೂಂಗಳನ್ನ ಈ ಬಂಗಲೆ ಒಳಗೊಂಡಿದೆ. 2004ರ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರ ಸೋತ ಬಳಿಕ ವಾಜಪೇಯಿ ಅವರಿಗೆ ಈ ಬಂಗಲೆಯನ್ನು ನೀಡಲಾಗಿತ್ತು. ಆ ಬಳಿಕ 14 ವರ್ಷಗಳ ಕಾಲ ವಾಜಪೇಯಿ ಸಂಬಂಧಿಗಳೊಂದಿಗೆ ಇದೇ ಬಂಗಲೆಯಲ್ಲಿ ವಾಸವಾಗಿದ್ದರು.