ನವದೆಹಲಿ: ದೆಹಲಿಯ ಕೊರೊನಾ ವೈರಸ್ ಬಿಕ್ಕಟ್ಟಿನ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಸರ್ವಪಕ್ಷ ಸಭೆ ನಡೆಸಿದರು. ಕೋವಿಡ್-19 ಗಾಗಿ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ಎಲ್ಲಾ ನಾಯಕರಿಗೆ ಭರವಸೆ ನೀಡಿದರು.
ಮುಂದಿನ ಲಾಕ್‌ಡೌನ್ ಬಗೆಗೆ ಯಾವುದೇ ಪಕ್ಷ ಯಾವುದೇ ಸಲಹೆಯನ್ನು ನೀಡಿಲ್ಲ ಎಂದು ಸರ್ಕಾರಿ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
ಸರ್ವಪಕ್ಷ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೂನ್ 18 ರೊಳಗೆ ದೆಹಲಿ ಸರ್ಕಾರವು ದಿನಕ್ಕೆ 18,000 ಕೊರೊನಾ ಪರೀಕ್ಷೆಗಳನ್ನು ನಡೆಸಲು ಪ್ರಾರಂಭಿಸುತ್ತದೆ ಎಂದು ಹೇಳಿದರು.
ದೆಹಲಿಯ ನಿವಾಸಿಗಳ ಕೋವಿಡ್ ಪರೀಕ್ಷೆಗೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅವರ ಕಾರ್ಯಕರ್ತರು ಸಹಾಯ ಮಾಡಬೇಕೆಂದು ಗೃಹ ಸಚಿವರು ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.
ಖಾಸಗಿ ಆಸ್ಪತ್ರೆಗಳ ಶುಲ್ಕವನ್ನು ನಿಗದಿಪಡಿಸಬೇಕು ಎಂದು ನಾವು ಸೂಚಿಸಿದ್ದೇವೆ ಮತ್ತು ದೆಹಲಿಯಲ್ಲಿ ಕೋವಿಡ್-19 ಪರೀಕ್ಷಾ ಶುಲ್ಕವನ್ನು 50 ಶೇಕಡಾ ಕಡಿತಗೊಳಿಸುವಂತೆ ಒತ್ತಾಯಿಸಿದ್ದೇವೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಎಎಪಿ ನಾಯಕ ಸಂಜಯ್ ಸಿಂಗ್, 450 ರೂ.ಗಳ ವೆಚ್ಚದೊಂದಿಗೆ ಹೊಸ ಕೊರೊನಾ ಪರೀಕ್ಷೆ ಶೀಘ್ರದಲ್ಲೇ ಲಭ್ಯವಾಗಲಿದೆ. ಇದನ್ನು 15 ನಿಮಿಷಗಳಲ್ಲಿ ನಡೆಸಲಾಗುವುದು. ಆಂಬುಲೆನ್ಸ್ ಸಮಯ ಸಹ ತಿಳಿಸಲಾಗುವುದು ಎಂದು ಹೇಳಿದರು.
ಪ್ರತಿಯೊಬ್ಬರೂ ಪರೀಕ್ಷಿಸುವ ಹಕ್ಕನ್ನು ಹೊಂದಿರಬೇಕು. ಎಲ್ಲಾ ದೇಶಗಳು ಅನುಸರಿಸುವ ಪರೀಕ್ಷೆ ಮತ್ತು ಪತ್ತೆ ನೀತಿಯ ಮೂಲಕ ಮಾತ್ರ ಚಿಕಿತ್ಸೆ ಸಾಧ್ಯ, ಮತ್ತು ಶಾ ಅದನ್ನು ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅನಿಲ್ ಚೌಧರಿ ಹೇಳಿದ್ದಾರೆ.
ಭಾನುವಾರ, ಅಮಿತ್ ಶಾ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ಎಲ್-ಜಿ ಅನಿಲ್ ಬೈಜಾಲ್, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರೊಂದಿಗೆ ಸಭೆ ನಡೆಸಿ ರಾಷ್ಟ್ರ ರಾಜಧಾನಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳನ್ನು ಪ್ರಕಟಿಸಿದರು. ಕೊರೊನಾ ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡುವ ಕುರಿತು ಇಂದು ವರದಿಯನ್ನು ಸಲ್ಲಿಸುವ ಕೇಂದ್ರದಿಂದ ಸಮಿತಿಯನ್ನು ರಚಿಸಲಾಗಿದೆ.