ಜೈಪುರ / ನವದೆಹಲಿ: ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಸಿಎಂ ಅಶೋಕ್ ಗೆಹ್ಲೋಟ್ ಗದ್ದುಗೆ ಅಲುಗಾಡುತ್ತಿದೆ. ಬಂಡಾಯದ ಬಿಸಿ ನಡುವೆ, ಇಡಿ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ಸಿಎಂ ಗೆಹ್ಲೋಟ್ ಜತೆ ಸಂಪರ್ಕ ಹೊಂದಿದ ಆಪ್ತರ ನಿವಾಸಗಳ ಮೇಲೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಐಟಿ ಇಲಾಖೆಯ ಪ್ರಕಾರ, 300 ಕ್ಕೂ ಹೆಚ್ಚು ಅಧಿಕಾರಿಗಳನ್ನು ಒಳಗೊಂಡ ತಂಡವು ದೆಹಲಿ, ರಾಜಸ್ಥಾನ ಮತ್ತು ಮುಂಬೈನ 43 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದೆ. ಮುಖ್ಯಮಂತ್ರಿಯ ಆಪ್ತರಾದ ರಾಜೀವ್ ಅರೋರಾ ಮತ್ತು ಧರ್ಮೇಂದ್ರ ರಾಥೋಡ್ ಸೇರಿದಂತೆ ಹಿರಿಯ ರಾಜ್ಯ ಕಾಂಗ್ರೆಸ್ ನಾಯಕರ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಹುಡುಕಾಟ ನಡೆಸಿದ್ದಾರೆ.
ದಾಳಿ ವೇಳೆ ಭಾರಿ ಪ್ರಮಾಣದ ನಗದು, ಆಭರಣ, ಆಸ್ತಿ ಪತ್ರಗಳು ಮತ್ತು ಲಾಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಿಲ್ವಾರಾ ಮತ್ತು ಜಾಲ್ವಾಡಗೂ ಐಟಿ ಇಲಾಖೆ ತಂಡ ತೆರಳಿ ಪರಿಶೀಲನೆ ನಡೆಸಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.
ಸಿಎಂ ಆಪ್ತರ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರಿಂದ ನಿನ್ನೆ ಕರೆದಿದ್ದ ರಾಜಸ್ಥಾನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮೂರು ಗಂಟೆಗಳ ಕಾಲ ಮುಂದೂಡಲಾಗಿತ್ತು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ತಮ್ಮ ಗುರಿ ಸಾಧಿಸಲು ತನಿಖಾ ದಳಗಳನ್ನ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಅಶೋಕ್ ಗೆಹ್ಲೋಟ್ ಅವರ ನಾಯಕತ್ವದ ವಿರುದ್ಧ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಬಂಡಾಯ ಎದ್ದಿರುವ ಬೆಳವಣಿಗೆಗಳ ನಂತರ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಭುಗಿಲೆದ್ದಿದೆ.