ನವದೆಹಲಿ: ಡೆಡ್ಲಿ ಕೋವಿಡ್-19 ವೈರಸ್ ಏಕಾಏಕಿ ಮಹಿಳೆಯರ ಲೈಂಗಿಕ ಆರೋಗ್ಯ ಮತ್ತು ಸಂತಾನೋತ್ಪತ್ತಿ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ ಎಂದು ಮಹಿಳಾ ರೋಗ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ದೆಹಲಿಯ ಫಿನಿಕ್ಸ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಸೋನಿಯಾ ಶರ್ಮಾ, ಸದ್ಯದ ಕೊರೊನಾ ಪರಿಸ್ಥಿತಿ ಮಹಿಳೆಯರ ಪಾಲಿಗೆ ಅತೀ ‘ಕೆಟ್ಟ’ ಸಮಯ ಎಂದು ತಿಳಿಸಿದ್ದಾರೆ. “ನಾನು ಅವರೊಂದಿಗೆ ವಿಡಿಯೋ ಸಂವಾದ ನಡೆಸುತ್ತಿದ್ದೇನೆ. ಈ ಪರಿಸ್ಥಿತಿ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ತುಂಬಾ ಭಯಾನಕವಾಗಿದೆ ಎಂದಿದ್ದಾರೆ.
"ಅತ್ಯಂತ ದುಃಖಕರ ಸಂಗತಿಯೆಂದರೆ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರು ಈ ಸಮಯದಲ್ಲಿ ತುಂಬಾ ದುರ್ಬಲರಾಗಿದ್ದಾರೆ. ಸಂತಾನೋತ್ಪತ್ತಿ ಮೇಲೆ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಈ ಸಮಯದಲ್ಲಿ ಯಾರಾದರೂ ಆಕಸ್ಮಿಕವಾಗಿ ಗರ್ಭಿಣಿಯಾಗಿದ್ದರೆ ಮತ್ತು ದುರದೃಷ್ಟವಶಾತ್ ಅವರು ಗರ್ಭ ಧಾರಣೆಯ ಪರಿಸ್ಥಿತಿಯಲ್ಲಿದ್ದರೆ ಅಥವಾ ಮಗು ಬೇಡ ಎಂದು ಅಬಾರ್ಷನ್ ಮಾಡಿಸಿಕೊಳ್ಳುವುದಾದರೆ ಅವರಿಗೆ ಇದ್ಯಾವುದೂ ಸದ್ಯ ಸಾಧ್ಯವಿಲ್ಲ. ಯಾವುದೇ ಚಿಕತ್ಸೆ ಲಭ್ಯವಿರದ ಕಾರಣ ಇದು ಮಹಿಳೆಯರನ್ನು ಸಂಕಷ್ಟಕ್ಕೆ ದೂಡುತ್ತದೆ ಎಂದು ತಿಳಿಸಿದ್ದಾರೆ.
COVID-19 ಪರೀಕ್ಷೆ ಮಾಡದೇ ಯಾವುದೇ ರೋಗಿಯನ್ನು ಆಸ್ಪತ್ರೆಯು ಚಿಕಿತ್ಸೆ ನೀಡಲು ಮುಂದೆ ಬರುವುದಿಲ್ಲ. ಹೀಗಾಗಿ ಕೊರೊನಾದ ಈ ದಿನಗಳಲ್ಲಿ ಆಸ್ಪತ್ರೆಗೆ ದಾಖಲು ಮಾಡುವುದು ತುಂಬಾ ಕಷ್ಟ ಎಂದು ಡಾ. ಶರ್ಮಾ ಹೇಳುತ್ತಾರೆ. ಸಾರಿಗೆ ಸೇವೆಗಳ ಅಲಭ್ಯತೆ, ಓಡಾಡಲು ಸರ್ಕಾರದ ನಿರ್ಬಂಧಗಳು ಮಹಿಳೆಯರ ಸಂತಾನೋತ್ಪತ್ತಿ ಶಕ್ತಿ ಕ್ಷೀಣಿಸಲು ಹಾಗೂ ಆರೋಗ್ಯ ಹದಗೆಡಲು ಪ್ರಮುಖ ಕಾರಣವಾಗಿವೆ. ಇಂತಹ ಸಮಯದಲ್ಲಿ ನಿರ್ದಿಷ್ಟವಾಗಿ COVID-19 ಪ್ರಕರಣಗಳನ್ನು ನಿರ್ವಹಿಸುವ ಆಸ್ಪತ್ರೆಗಳ ಮಾದರಿಯಲ್ಲಿ ಮಹಿಳೆಯರಿಗಾಗಿ ಆಸ್ಪತ್ರೆಗಳು ಇರುವುದು ಅವಶ್ಯಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮದುವೆಗೆ ಮೊದಲೇ ಗರ್ಭಿಣಿಯಾಗುವ ಅವಿವಾಹಿತ ಮಹಿಳೆಯರ ಮೇಲಂತೂ ಈ ಪರಿಸ್ಥಿತಿ ತುಂಬಾ ಕೆಟ್ಟ ಪರಿಣಾಮ ಬೀರಲಿದೆ ಎಂದ್ರು.
ಈ ಕುರಿತು ಪ್ರತಿಕ್ರಿಯಿಸಿರುವ ಮತ್ತೊಬ್ಬ ಸ್ತ್ರೀರೋಗ ತಜ್ಞೆ ಅನಿತಾ ಗುಪ್ತಾ, ಕೊರೊನಾ ಬಿಕ್ಕಟ್ಟಿನಿಂದಾಗಿ ಐವಿಎಫ್ ಗರ್ಭ ಧಾರಣೆಯೂ ವಿಳಂಬವಾಗುತ್ತಿದೆ ಎಂದು ತಿಳಿಸಿದ್ದಾರೆ.
ಮತ್ತೊಬ್ಬ ವೈದ್ಯೆ ಡಾ. ಬಂಧನ ಸೋದಿ, ಕೊರೊನಾದಿಂದ ಒತ್ತಡಕ್ಕೆ ಸಿಲುಕುವುದರಿಂದ ಮಹಿಳೆಯರ ಋತುಚಕ್ರ ಏರುಪೇರಾಗುತ್ತದೆ. ಇದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಕಳವಳ ಹೊರ ಹಾಕಿದ್ದಾರೆ. ಇನ್ನು ಲಾಕ್ಡೌನ್ನಿಂದ ಗರ್ಭಿಣಿಯರು ನಿಯಮಿತ ತಪಾಸಣೆಗೆ ಬರಲು ಸಾಧ್ಯವಿಲ್ಲ. ಗರ್ಭಿಣಿ ಮಹಿಳೆಯರ ವಿಷಯದಲ್ಲಿ ನಾವು ಎದುರಿಸುತ್ತಿರುವ ಪ್ರಮುಖ ಸಮಸ್ಯೆ ಇದು ಎಂದು ತಿಳಿಸಿದ್ದಾರೆ. ಇನ್ನು ಲಾಕ್ಡೌನ್ನಂತಹ ಕೆಟ್ಟ ಪರಿಸ್ಥಿತಿಯಲ್ಲಿ ಮಗುವನ್ನು ಪಡೆಯುವುದು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದು ಮಹಿಳೆಯೊಬ್ಬರು ಇಷ್ಟವಿಲ್ಲದಿದ್ದರೂ ಗರ್ಭಪಾತ ಮಾಡಿಸಿಕೊಂಡಿದ್ದಾರೆ. ಇದು ಕೊರೊನಾ ತಂದಿಟ್ಟ ಅತ್ಯಂತ ಕೆಟ್ಟ ಪರಿಣಾಮ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಬಿಕ್ಕಟ್ಟಿನಿಂದ ಮಾನಸಿಕವಾಗಿ ನೊಂದಿರುವ ಮಹಿಳೆಯರಿಗೆ ನಾವು ಆನ್ಲೈನ್ ಮೂಲಕ ಸಹಾಯ ಮಾಡಲು ಯತ್ನಿಸುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.