ವಾಷಿಂಗ್ಟನ್(ಅಮೇರಿಕಾ): ವಿಶ್ವಾದ್ಯಂತ ನೊವೆಲ್ ಕೊರೊನಾ ಹರಡಿದ್ದೇಗೆ, ವೈರಸ್ ಕುರಿತ ಸತ್ಯಾಂಶಗಳನ್ನು ಚೀನಾ ಬಹಿರಂಗ ಪಡಿಸಬೇಕು ಎಂದು ವಿಶ್ವದ ದೊಡ್ಡಣ್ಣ ಅಮೇರಿಕಾ ಪಟ್ಟು ಹಿಡಿದಿದೆ.
ಈ ಬಗ್ಗೆ ಮಾತನಾಡಿರುವ ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ, ಕೋವಿಡ್19 ವೈರಸ್ ಬಗ್ಗೆ ಚೀನಾ ಸರ್ಕಾರದ ಸ್ಪಷ್ಟ ಮಾಹಿತಿಯ ಅಗತ್ಯವಿದೆ. ಸಹಕಾರ ನೀಡುವಂತೆ ಕೋರಿರುವ ಅವರು, ಮೊದಲು ವೈರಸ್‌ನ ಬಗ್ಗೆ ತಿಳಿಸಬೇಕು ಅಂತ ಒತ್ತಾಯಿಸಿದ್ದಾರೆ. ಕೋವಿಡ್ ವೈರಸ್ ಹುಟ್ಟಿದ್ದೇಗೆ, ಜಾಗತಿಕ ಮಟ್ಟದಲ್ಲಿ ಹರಡಿದ್ದೇಗೆ ಎಂಬುದು ವಿಶ್ವದ ವಿಜ್ಞಾನಗಳಿಗೆ ಗೊತ್ತಾಗಬೇಕು ಅಂತ ಹೇಳಿದ್ದಾರೆ.
ಮಹಾಮಾರಿ ವೈರಸ್ ದೊಡ್ಡ ಪ್ರಮಾಣದಲ್ಲಿ ಹರಡುವ ಮೊದಲೇ ಅಲ್ಲಿನ ನಾಯಕರಿಗೆ ಈ ಬಗ್ಗೆ ತಿಳಿದಿತ್ತು. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಆಡಳಿತ ಸರ್ಕಾರ ಆಗಿರುವ ಕಮ್ಯೂನಿಸ್ಟ್ ಪಕ್ಷ ಚೀನಾದಲ್ಲಿ ಏನಾಗಿದೆ ಎಂಬುದನ್ನು ಹೇಳುವ ಮೊದಲೇ ಹೆಚ್ಚು ಪ್ರಕರಣಗಳು, ಪ್ರಯಾಣಿಕರ ಪ್ರವಾಸ ಹೀಗೆ ಹತ್ತಾರು ಬೆಳವಣಿಗೆಗಳು ನಡೆದು ಹೋಗಿವೆ. ಪ್ರಜಾಪ್ರಭುತ್ವದ ಸರ್ಕಾರಗಳು ಯಾವುದೇ ಕಾರಣಕ್ಕೂ ಇಂತಹ ನಡೆಯನ್ನು ಅನುಸರಿಬಾರದು. ಯಾಕೆ ಇವರು ಪಾರದರ್ಶಕತೆಯನ್ನ ಮರೆಮಾಚಿ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಪಾಂಪಿಯೋ ಪ್ರಶ್ನಿಸಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋವಿಡ್ ವೈರಸ್ ಕುರಿತು ಚೀನಾ ಸ್ಪಷ್ಟತೆ ನೀಡಬೇಕು ಎಂಬ ಪ್ರಶ್ನೆ ಎತ್ತಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಅವರು ಮಾಹಿತಿ ಮರೆಮಾಚುವಿಕೆ, ಸುಳ್ಳು ಹೇಳಿಕೆಗಳನ್ನು ತಜ್ಞರು ಟೀಕಿಸಿದ್ದಾರೆ. ಜಾನ್‌ಹೋಪ್‌ಕಿನ್ಸ್ ಪ್ರಕಾರ ಚೀನಾದ ವುಹಾನ್‌ನಲ್ಲಿ ಕಳೆದ 2019ರ ನವೆಂಬರ್‌ನಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು. ಜಗತ್ತಿನಾದ್ಯಂತ 2 ಮಿಲಿಯನ್ ಅಧಿಕ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 1.6 ಲಕ್ಷಕ್ಕೂ ಅಧಿಕ ಜನರನ್ನು ಬಲಿ ಪಡೆದಿದೆ ಎಂದು ಜಾನ್‌ಹೋಪ್ ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.