ಪ್ರಯಾಗರಾಜ್ (ಉತ್ತರಪ್ರದೇಶ): ಕಾನೂನುಬಾಹಿರ ಮತಾಂತರಗಳನ್ನು ನಿಷೇಧಿಸುವ ಉತ್ತರಪ್ರದೇಶ ಸರ್ಕಾರದ ಸುಗ್ರೀವಾಜ್ಞೆ ತಡೆಹಿಡಿಯಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ.
'ಲವ್ ಜಿಹಾದ್' ಹೆಸರಿನಲ್ಲಿ ಮತಾಂತರವನ್ನು ನಿಷೇಧಿಸಲು ಉತ್ತರಪ್ರದೇಶ ಸರ್ಕಾರ ನವೆಂಬರ್ 24ರಂದು 'ವಿಧಿ ವಿರುಧ್ ಧರ್ಮಾಂತರನ್-2020' ಎಂಬ ಹೆಸರಿನಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಿತ್ತು. 'ಲವ್ ಜಿಹಾದ್' ಎಂಬುದು ಕಾನೂನು ಬಾಹಿರ ಮತಾಂತರ ಎಂದು ಈ ಸುಗ್ರೀವಾಜ್ಞೆಯಲ್ಲಿ ಘೋಷಿಸಲಾಗಿತ್ತು.
ಈ ಸುಗ್ರೀವಾಜ್ಞೆ ವಿರುದ್ಧ ತಡೆಯಾಜ್ಞೆ ನೀಡಲು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಎಲ್ಎ) ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಮತ್ತು ನ್ಯಾ. ಪಿಯೂಷ್ ಅಗ್ರವಾಲ್ ಅವರನ್ನೊಳಗೊಂಡ ನ್ಯಾಯಪೀಠವು, ಸುಗ್ರೀವಾಜ್ಞೆಯನ್ನು ತಡೆಹಿಡಿಯಲು ಹಾಗೂ ತಡೆಯಾಜ್ಞೆಯ ರೂಪದಲ್ಲಿ ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದೆ.
ಇದನ್ನೂ ಓದಿ: ತನ್ನ ಹೆಸರು ಬದಲಿಸಿ ಹುಡುಗಿಯ ಮತಾಂತರ ಯತ್ನ: ಯುಪಿಯಲ್ಲಿ ಯುವಕನ ಬಂಧನ
ಅಲ್ಲದೇ 'ಮತಾಂತರ ನಿಷೇಧ - 2020' ಕಾನೂನನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದವರಿಗೆ ಹೈಕೋರ್ಟ್ ನೋಟಿಸ್ ನೀಡಿದ್ದು, ಜನವರಿ 4ರೊಳಗೆ ಪಿಐಎಲ್‌ಗಳ ವಿರುದ್ಧ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜನವರಿ 7ಕ್ಕೆ ನಿಗದಿಪಡಿಸಿದೆ.
ಮತಾಂತರ ನಿಷೇಧ ಕಾನೂನಿನ ಅಡಿ ಕೇವಲ ವಿವಾಹಕ್ಕೋಸ್ಕರ ಬಲವಂತದ ಮತಾಂತರ ನಡೆಸಿದ ಆರೋಪಿಗಳಿಗೆ 15 ಸಾವಿರ ರೂ.ಗಳ ದಂಡದೊಂದಿಗೆ 1-5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಎಸ್‌ಸಿ/ಎಸ್‌ಟಿ ಸಮುದಾಯದ ಅಪ್ರಾಪ್ತರು ಮತ್ತು ಮಹಿಳೆಯರ ಮತಾಂತರಕ್ಕೆ ₹25 ಸಾವಿರ ದಂಡದೊಂದಿಗೆ 3-10 ವರ್ಷಗಳ ಜೈಲು ಶಿಕ್ಷೆ ಇರುತ್ತದೆ.