ಪ್ರಯಾಗ್ರಾಜ್ (ಉತ್ತರ ಪ್ರದೇಶ): ಮುಖ್ಯ ನಾಯಾಧೀಶರ ಹೆಸರಿಗೆ ಬಂದಿದ್ದ ಪತ್ರವೊಂದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಆಗಿ ಪರಿವರ್ತಿಸಿದ ಘಟನೆ ನಡೆದ ಅಲಹಾಬಾದ್ ಹೈಕೋರ್ಟ್ನಲ್ಲಿ ನಡೆದಿದೆ. ಇದನ್ನು ಪತ್ರವನ್ನು ಆಧಾರವಾಗಿಸಿಕೊಂಡು ಹೈಕೋರ್ಟ್ ಉತ್ತರಪ್ರದೇಶ ಸರ್ಕಾರಕ್ಕೆ ಪ್ರತಿಕ್ರಿಯಿಸುವಂತೆ ನಿರ್ದೇಶನ ನೀಡಿದೆ.
ಪತ್ರವನ್ನು ಪಿಐಎಲ್ ಆಗಿ ಪರಿವರ್ತನೆ ಮಾಡಿದ ಅಪರೂಪದ ಪ್ರಕರಣ ಇದಾಗಿದ್ದು, ಹೈಕೋರ್ಟ್ ವಕೀಲ ಗೌರವ್ ಕುಮಾರ್ ಎಂಬುವವರು ಇದನ್ನು ಹೈಕೋರ್ಟ್ಗೆ ಸಲ್ಲಿಸಿದ್ದರು. ಪತ್ರದಲ್ಲಿ ಪ್ರಯಾಗರಾಜ್ ನಿವಾಸಿ ವೀರೇಂದ್ರ ಸಿಂಗ್ ಎಂಬ ಕೊರೊನಾ ಸೋಂಕಿತ ವ್ಯಕ್ತಿಯ ಸಾವಿನ ಬಗ್ಗೆ ಉಲ್ಲೇಖಿಸಿದ್ದರು.
ಹೈಕೋರ್ಟ್ ರಿಜಿಸ್ಟರ್ ಹೆಸರಿಗೆ ನೋಂದಾಯಿಸಲಾಗಿದ್ದ ಈ ಪತ್ರದಲ್ಲಿ ''ಕ್ವಾರಂಟೈನ್ ಕೇಂದ್ರಗಳಲ್ಲಿನ ಅಮಾನವೀಯ ವಾತಾವರಣ ಮತ್ತು ಕೊರೊನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ'' ಎಂಬ ಒಕ್ಕಣೆಯಿದ್ದು, ಕೊರೊನಾ ಸೋಂಕಿತ ವ್ಯಕ್ತಿಯು ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆಯಿಲ್ಲದೇ ಸಾವನ್ನಪ್ಪಿದ್ದಾನೆ ಎಂದು ಸ್ಪಷ್ಟಪಡಿಸಲಾಗಿತ್ತು.
ಅಲಹಾಬಾದ್ ಮುಖ್ಯ ನ್ಯಾಯಾಧೀಶ ಗೋವಿಂದ್ ಮಾಥೂರ್ ಹಾಗೂ ನ್ಯಾಯಮೂರ್ತಿ ಸಿದ್ಧಾರ್ಥ್ ವರ್ಮ ಈ ಪತ್ರವನ್ನು ಪಿಐಎಲ್ ಆಗಿ ಪರಿವರ್ತಿಸಿದ್ದು, ಇದರ ಜೊತೆಗೆ ಕ್ವಾರಂಟೈನ್ ಕೇಂದ್ರಗಳ ಸ್ಥಿತಿಗತಿಗಳ ಬಗ್ಗೆ ಹರಿದಾಡುತ್ತಿದ್ದ ವಿಡಿಯೋವೊಂದನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಈಗ ಸದ್ಯಕ್ಕೆ ರಾಜ್ಯ ಸರ್ಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಕ್ವಾರಂಟೈನ್ ಕೇಂದ್ರಗಳಲ್ಲಿನ ಚಿಕಿತ್ಸೆ, ವಾತಾವರಣದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನಿರ್ದೇಶನ ನೀಡಿದೆ.