ಹೈದರಾಬಾದ್: ಅಮೆರಿಕ ಉಪಾಧ್ಯಕ್ಷೆಯಾಗಿ ಆಯ್ಕೆ ಆಗಿರುವ ಭಾರತೀಯ ಅಮೆರಿಕನ್ ಮೂಲದ ಕಮಲಾ ಹ್ಯಾರಿಸ್ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದ್ದಾರೆ.
56 ವರ್ಷದ ಕ್ಯಾಲಿಫೋರ್ನಿಯಾ ಸೆನೆಟರ್ ಆಗಿರುವ ಕಮಲಾ ಹ್ಯಾರಿಸ್, ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯೂ ಹೌದು, ಭಾರತೀಯ ಅಮೆರಿಕನ್ ಮೂಲದ ಮೊದಲ ಉಪಾಧ್ಯಕ್ಷೆ ಮತ್ತು ದಕ್ಷಿಣ ಏಷ್ಯಾದ ಮೊದಲ ಮಹಿಳಾ ಉಪಾಧ್ಯಕ್ಷೆ ಜೊತೆಗೆ ಈ ಪಟ್ಟಕ್ಕೇರಿದ ಮೊದಲ ಕಪ್ಪು ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಕಮಲಾ ಹ್ಯಾರಿಸ್ 1964ರಲ್ಲಿ ಜನಿಸಿದ್ದಾರೆ. ಇವರ ತಂದೆ ಡೊನಾಲ್ಡ್ ಹ್ಯಾರಿಸ್ ಜಮೈಕಾ ಮೂಲದವರು ಮತ್ತು ತಾಯಿ ಶ್ಯಾಮಲಾ ಗೋಪಾಲನ್ ಭಾರತೀಯ ಮೂಲದವರು. ಇವರ ತಾತ ಪಿ.ವಿ.ಗೋಪಾಲನ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರರು. ವೃತ್ತಿಯಲ್ಲಿ ಲಾಯರ್ ಆಗಿರುವ ಡೋಗ್ಲಾಸ್ ಎಮ್ಹೋಫ್ ಇವರ ಪತಿ.
ಓಕ್ ಲ್ಯಾಂಡ್ನಲ್ಲಿ ಅ.20, 1964ರಲ್ಲಿ ಜನಿಸಿದ ಕಮಲಾ ಹ್ಯಾರಿಸ್, ಬರ್ಕೆಲೆಯಲ್ಲಿ ಬೆಳೆದರು. ಬಳಿಕ ಕೆನಡಾದಲ್ಲಿ ಹೈಸ್ಕೂಲ್ ಮುಗಿಸಿದರು. ನಂತರ ಅಮೆರಿಕದಲ್ಲಿ ಕಾಲೇಜು ಶಿಕ್ಷಣ, ಹಾರ್ವರ್ಡ್ ವಿವಿಯಲ್ಲಿ ಪದವಿ ಪಡೆದ. ಜೊತೆಗೆ ಕ್ಯಾಲಿಫೋರ್ನಿಯಾ, ಹೇಸ್ಟಿಂಗ್ಸ್ ವಿವಿಗಳಲ್ಲಿ ಕಾನೂನು ಪದವಿ ಗಳಿಸಿದ್ದಾರೆ.
2003ರಲ್ಲಿ ಮೊದಲ ಬಾರಿಗೆ ಜಯ ಗಳಿಸಿದ ಹ್ಯಾರಿಸ್, ಸ್ಯಾನ್ ಫ್ರಾನ್ಸಿಸ್ಕೋ ಜಿಲ್ಲೆಯ ಅಟಾರ್ನಿಯಾಗಿ ನೇಮಕವಾದರು. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಜಿಲ್ಲಾ ಅಟಾರ್ನಿಯಾಗಿ ಸೇವೆ ಸಲ್ಲಿಸಿದ ಮೊದಲ ಆಫ್ರಿಕನ್ ಅಮೆರಿಕನ್ ಮತ್ತು ಭಾರತೀಯ ಮೂಲದ ಮಹಿಳೆ ಎಂಬ ಖ್ಯಾತಿ ಕೂಡ ಇವರಿಗಿದೆ.
2010ರಲ್ಲಿ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಆಗಿ ಆಯ್ಕೆ ಆದರು. ಬಳಿಕ 2016ರಲ್ಲಿ ಸೆನೆಟ್ಗೆ ಚುನಾಯಿತರಾದರು. ಅಮೆರಿಕ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸುತ್ತಾ ಬಂದಿದ್ದ ಹ್ಯಾರಿಸ್ 2019ರಲ್ಲಿ ಅಧ್ಯಕ್ಷೀಯ ಚುನಾವಣಾ ಅಭಿಯಾನ ಕೂಡ ಆರಂಭಿಸಿದ್ದರು.
ಬಳಿಕ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಇದೀಗ ಐತಿಹಾಸಿಕ ವಿಜಯಮಾಲೆ ಧರಿಸಿದ್ದಾರೆ. ಈ ಮೂಲಕ ಕಮಲಾ ಹ್ಯಾರಿಸ್ ಹಲವು ಮೈಲುಗಲ್ಲುಗಳನ್ನು ನೆಟ್ಟಿದ್ದಾರೆ.