ಅಮರಾವತಿ (ಆಂಧ್ರ ಪ್ರದೇಶ): ಭಾರೀ ಮಳೆಯಿಂದಾಗಿ ಆಂಧ್ರಪ್ರದೇಶದ ಬಹುತೇಕ ಎಲ್ಲಾ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ.
ಪೂರ್ವ ಗೋದಾವರಿ ಜಿಲ್ಲೆಯ ಸರ್ ಆರ್ಥರ್ ಕಾಟನ್ ಅಣೆಕಟ್ಟಿನಲ್ಲಿ 44.65 ಅಡಿ ನೀರು ತುಂಬಿದ್ದು, 2.91 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಒಟ್ಟು ಸಾಮರ್ಥ್ಯ 2.93 ಟಿಎಂಸಿ ಇದ್ದು, ಈಗಾಗಲೇ ಶೇ 99.35ರಷ್ಟು ತುಂಬಿದೆ.
ಕೃಷ್ಣ ಜಿಲ್ಲೆಯ ವಿಜಯವಾಡದ ಪ್ರಕಾಶಂ ಅಣೆಕಟ್ಟು 56.2 ಅಡಿಗಳವರೆಗೆ ತುಂಬಿದ್ದು, 3.07 ಟಿಎಂಸಿ ಸಂಗ್ರಹವಾಗುವ ಮೂಲಕ ಶೇ 100ರಷ್ಟು ನೀರು ತುಂಬಿದೆ.
ಶ್ರೀಶೈಲಂ ಜಲಾಶಯದ ನೀರಿನ ಮಟ್ಟವು 885 ಅಡಿ ತಲುಪಿದ್ದು, 214.36 ಟಿಎಂಸಿ ನೀರು ಸಂಗ್ರಹವಾಗಿದೆ. 215.81 ಟಿಎಂಸಿ ಸಾಮರ್ಥ್ಯ ಹೊಂದಿರುವ ಕರ್ನೂಲ್ ಜಿಲ್ಲೆಯ ಜಲಾಶಯವು ಶೇ 99.98ರಷ್ಟು ತುಂಬಿದೆ.
ನಾಗಾರ್ಜುನ ಸಾಗರ್ ಜಲಾಶಯದ ನೀರಿನ ಮಟ್ಟ 589.5 ಅಡಿಗಳಾಗಿದ್ದು, ಇದು 312.05 ಟಿಎಂಸಿ ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿದೆ.
ಗುಂಟೂರು ಜಿಲ್ಲೆಯ ಜಲಾಶಯದಲ್ಲಿ 310.84 ಟಿಎಂಸಿ ನೀರು ತುಂಬಿದ್ದು, ಜಲಾಶಯ ಶೇ 99.62ರಷ್ಟು ತುಂಬಿದೆ.
ಪುಲಿಚಿಂಟಲಾ ಯೋಜನೆಯ ನೀರಿನ ಮಟ್ಟ 174.21 ಅಡಿ ತಲುಪಿದೆ. ಇದು ಒಟ್ಟು 45.77 ಟಿಎಂಸಿ ಸಾಮರ್ಥ್ಯವನ್ನು ಹೊಂದಿದ್ದು, ಪ್ರಸ್ತುತ 44.93 ಟಿಎಂಸಿ ನೀರು ಸಂಗ್ರಹವಾಗಿದೆ. ಅಂದರೆ ಒಟ್ಟು ಸಾಮರ್ಥ್ಯದ ಶೇಕಡಾ 97.81ರಷ್ಟು ತುಂಬಿದೆ.
ನೆಲ್ಲೂರು ಜಿಲ್ಲೆಯ ಸೋಮಸಿಲಾ ಜಲಾಶಯದ ನೀರಿನ ಮಟ್ಟ 328.22 ಅಡಿ ತಲುಪಿದೆ. ಈ ಜಲಾಶಯವು 78 ಟಿಎಂಸಿ ಒಟ್ಟು ಸಾಮರ್ಥ್ಯವನ್ನು ಹೊಂದಿದೆ. ಇದು ಶೇ 94.81ರಷ್ಟು ತುಂಬಿದ್ದು, 73.95 ಟಿಎಂಸಿ ಒಳಹರಿವು ಹೊಂದಿದೆ.