ಮಂಬೈ : ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ಕೆಳಗಿಳಿಸುವ ಪ್ರಯತ್ನವನ್ನು ಬಿಜೆಪಿ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರ ಶೀಘ್ರದಲ್ಲೇ ಮೈತ್ರಿಯೊಳಗಿನ ಭಿನ್ನಾಭಿಪ್ರಾಯಗಳಿಂದಲೇ ಪತನಗೊಳ್ಳಲಿದೆ. ಪರಸ್ಪರ ವಿರುದ್ದ ಸಿದ್ದಾಂತ ಹೊಂದಿರುವ ಮೂರು ಪಕ್ಷಗಳು ಜೊತೆಯಾಗಿ ಸರ್ಕಾರ ರಚಿಸಿದ ದಿನದಿಂದ ಸರ್ಕಾರದ ಒಳಗೆ ಭಿನ್ನಮತ ಇರುವುದು ಸ್ಪಷ್ಟವಾಗಿದೆ. ಸರ್ಕಾರ ಆಂತರಿಕ ಭಿನ್ನಾಭಿಪ್ರಾಯದಿಂದ ಪತನವಾಗುತ್ತದೆ ಎಂದಿದ್ದಾರೆ.
ಈ ನಡುವೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಉದ್ಧವ್ ಠಾಕ್ರೆ ಅವರನ್ನು ಬಾಂದ್ರಾದ ಮಾತೋ ಶ್ರೀ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಪ್ರಮುಖ ನಾಯಕರುಗಳೇ ಸಭೆಯನ್ನು ತಪ್ಪಿಸಿಕೊಳ್ಳುತ್ತಿರುವಾಗ ಅನಾರೋಗ್ಯದಿಂದ ಬಳಲುತ್ತಿರುವ ಶರದ್ ಪವಾರ್ ಮುಖ್ಯಮಂತ್ರಿ ಅವರನ್ನ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ.
ಸಭೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿದಿಲ್ಲವಾದರೂ, ಮುಂಬೈನ 12 ಉಪ ಪೊಲೀಸ್ ಆಯುಕ್ತರ ವರ್ಗಾವಣೆಯ ವಿಷಯವನ್ನು ಅದರಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಕೇವಲ ಇಷ್ಟು ಮಾತ್ರ ಚರ್ಚೆಯಾಗಿದೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಏಕೆಂದರೆ, ನಾಲ್ಕು ದಿನಗಳ ಹಿಂದೆ ಅಹ್ಮದ್‌ನಗರದ ನಾಲ್ವರು ಶಿವಸೇನೆ ಕೌನ್ಸಿಲರ್‌ಗಳು ಪಕ್ಷವನ್ನು ತೊರೆದು ಉಪಮುಖ್ಯಮಂತ್ರಿ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಸಮ್ಮುಖದಲ್ಲಿ ಎನ್‌ಸಿಪಿ ಸೇರಿಕೊಂಡಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದರೆ ಮಹಾರಾಷ್ಟ್ರ ಸರ್ಕಾರದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.