ನವದೆಹಲಿ: ದೇಶದಲ್ಲಿ ಹೇರಲಾಗಿರುವ 21 ದಿನಗಳ ಲಾಕ್ಡೌನ್ ಏಪ್ರಿಲ್ 14ರಂದು ಮುಕ್ತಾಯಗೊಳ್ಳಲಿದ್ದು ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ವಿಡಿಯೋ ಸಂವಾದ ನಡೆಸಿದರು.
ವಿಡಿಯೋ ಸಂವಾದದಲ್ಲಿ ಭಾಗಿಯಾದ ಬಳಿಕ ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ದೇಶದಲ್ಲಿ ಲಾಕ್ಡೌನ್ ವಿಸ್ತರಿಸುವಂತೆ ಎಲ್ಲ ಸಿಎಂಗಳು ಮನವಿ ಮಾಡಿದ್ದಾಗಿ ತಿಳಿಸಿದ್ರು.
ರಾಜ್ಯದಲ್ಲೂ ಏಪ್ರಿಲ್ 30ವರೆಗೆ ಲಾಕ್ಡೌನ್ ವಿಸ್ತರಣೆ ಮಾಡುವಂತೆ ತಿಳಿಸಿದ್ದೇವೆ. ಜತೆಗೆ ಯಾವುದೇ ಕಾರಣಕ್ಕೂ ಖಾಸಗಿ, ಸರ್ಕಾರಿ ಬಸ್ಗಳ ಸೇವೆ ಸದ್ಯಕ್ಕೆ ಬೇಡ. ರೈಲ್ವೆ ಸಂಚಾರ ಆರಂಭ ಮಾಡದಂತೆ ತಿಳಿಸಲಾಗಿದ್ದು, ಜೊತೆಗೆ ಯಾವುದೇ ಕಾರಣಕ್ಕೂ ಲಾಕ್ಡೌನ್ ಹಿಂತೆಗೆದುಕೊಳ್ಳದಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮಾತನಾಡಿ, ಲಾಕ್ಡೌನ್ ವಿಸ್ತರಿಸಲು ಪ್ರಧಾನಿ ಒಲವು ತೋರಿದ್ದು, ಅದಕ್ಕೆ ಸಮ್ಮತಿ ಸೂಚಿಸಿದ್ದೇವೆ. ಕೈಗಾರಿಕೆ ಹಾಗೂ ಕೃಷಿ ವಲಯಕ್ಕೆ ಕೆಲವು ರಿಯಾಯತಿ ನೀಡಲು ತಿಳಿಸಿರುವುದಾಗಿ ಅವರು ಹೇಳಿದ್ರು.
ಪಂಜಾಬ್ನಲ್ಲಿ ಏಪ್ರಿಲ್ 30ರವರೆಗೆ ಲಾಕ್ಡೌನ್ ವಿಸ್ತರಿಸಲಾಗಿದೆ. ಉಳಿದಂತೆ ರಾಜಸ್ಥಾನ, ಒಡಿಶಾದಲ್ಲೂ ಲಾಕ್ಡೌನ್ ಈಗಾಗಲೇ ವಿಸ್ತರಣೆಗೊಂಡಿದೆ. ಆದರೆ ರೈತರ ಹಿತದೃಷ್ಟಿಯಿಂದ ಕೆಲವು ರಾಜ್ಯಗಳು ಲಾಕ್ಡೌನ್ ವಿಸ್ತರಿಸಲು ಹಿಂದೇಟು ಹಾಕುತ್ತಿದ್ದು ರಿಯಾಯತಿ ನೀಡುವಂತೆ ಒತ್ತಾಯಿಸಿವೆ.