ನವದೆಹಲಿ: ಮೇ 22 ರಿಂದ (ಶುಕ್ರವಾರ) ವಿಡಿಯೋ ಕಾನ್ಫರೆನ್ಸ್ ಮೂಲಕ 'ಎಲ್ಲ ರೀತಿಯ ತುರ್ತು ಪ್ರಕರಣ'ಗಳ ವಿಚಾರಣೆಗೆ ಎಲ್ಲ ನ್ಯಾಯಮೂರ್ತಿಗಳು ಹಾಜರಿರಲು ದೆಹಲಿ ಹೈಕೋರ್ಟ್ ಸೂಚಿಸಿದೆ.
ಮಾರ್ಚ್ 24 ರಿಂದ ಮೇ 19 ರವರೆಗೂ ಕೊರೊನಾ ಸಂಬಂಧಿಸಿದ ಲಾಕ್ಡೌನ್ ಸಮಯದಲ್ಲಿ ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳು 20,726 ತುರ್ತು ಪ್ರಕರಣಗಳನ್ನು ಕೈಗೆತ್ತಿಕೊಂಡಿವೆ.
ಕೊರೊನಾ ಲಾಕ್ಡೌನ್ ಆರಂಭವಾದಾಗಿನಿಂದ ಈವರೆಗೂ ಎರಡು ವಿಭಾಗದ ಪೀಠಗಳು ಮತ್ತು ಹತ್ತು ಏಕ - ನ್ಯಾಯಮೂರ್ತಿಗಳ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದವು. ಈ ಪೀಠಗಳ ಜಡ್ಜ್ಗಳು ರೊಟೇಷನ್ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಹೈಕೋರ್ಟ್ನಲ್ಲಿ ಪ್ರಸ್ತುತ ಏಳು ವಿಭಾಗೀಯ ಪೀಠ ಮತ್ತು 19 ಏಕ-ವಿಭಾಗೀಯ ಪೀಠಗಳಿವೆ.
ಮುಖ್ಯನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ದೆಹಲಿಯ ಹೈಕೋರ್ಟ್‌ನ ಇತರ ನ್ಯಾಯಮೂರ್ತಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಮೇ 22ರಿಂದ ಎಲ್ಲ ವಿಭಾಗೀಯ ಪೀಠಗಳು ಮತ್ತು ಎಲ್ಲಾ ಏಕ - ನ್ಯಾಯಾಮೂರ್ತಿಗಳ ಪೀಠಗಳು ಎಲ್ಲ ರೀತಿಯ ತುರ್ತು ಪ್ರಕರಣಗಳನ್ನು ವಿಚಾರಣೆ ನಡೆಸಲಿವೆ. ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮನೋಜ್ ಜೈನ್ ಆದೇಶ ಹೊರಡಿಸಿದ್ದಾರೆ.
ಕೊನೆಯ ಹಂತದ ವಿಚಾರಣೆ ಪ್ರಕರಣಗಳನ್ನು ಮತ್ತು ಲಿಖಿತ ದೂರುಗಳನ್ನು ಶೀಘ್ರ ವಿಲೇವಾರಿ ಮಾಡಲು ಎರಡೂ ವಿಭಾಗೀಯ ಪೀಠದಿಂದ ಒಪ್ಪಿಗೆ ಸಿಕ್ಕಿದೆ.