ಶಿಮ್ಲಾ (ಹಿಮಾಚಲ ಪ್ರದೇಶ): ದೇಶದ ಕೆಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢಪಟ್ಟ ಹಿನ್ನೆಲೆ ಹಿಮಾಚಲದಲ್ಲಿ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಅಧಿಸೂಚನೆ ಸಹ ನೀಡಲಾಗಿದ್ದು, ಆಡಳಿತವು ಪಂಜಾಬ್ ಮತ್ತು ಹರಿಯಾಣ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ನಂತರ ಹಿಮಾಚಲದಲ್ಲಿ 1000ಕ್ಕೂ ಹೆಚ್ಚು ಪಕ್ಷಿಗಳು ಸಾವನ್ನಪ್ಪಿವೆ.
ಪಶುಸಂಗೋಪನಾ ಇಲಾಖೆ ಈ ನಿಟ್ಟಿನಲ್ಲಿ ರಾಜ್ಯಗಳ ಎಲ್ಲ ಡಿಸಿಗಳಿಗೆ ಸಲಹೆ ನೀಡಿದ್ದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದೆ. ಸತ್ತ ಹಕ್ಕಿಗಳ ಮಾದರಿಗಳನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ರಾಜಸ್ಥಾನದ ಹಾಲಾವರ್ ಜಿಲ್ಲೆಯಲ್ಲಿ ಹಕ್ಕಿ ಜ್ವರ ದೃಢಪಟ್ಟ ಹಿನ್ನೆಲೆ, ಕೋಟಾ ಮತ್ತು ಪಾಲಿಯಲ್ಲಿ ಕಾಗೆಗಳು ಸಾವನ್ನಪ್ಪಿವೆ. ಇದು ಈಗ ಐದು ಜಿಲ್ಲೆಗಳಿಗೆ ಹರಡಿದೆ. ಬರಾನ್‌ನಲ್ಲಿ 19, ಹಾಲಾವರ್‌ನಲ್ಲಿ 15 ಮತ್ತು ಕೋಟಾದ ರಾಮಗಂಜ್‌ಮಂಡಿಯಲ್ಲಿ 22 ಸಾವುಗಳು ಸಂಭವಿಸಿವೆ. ಕೋಟಾ ವಿಭಾಗದ ಈ ಮೂರು ಜಿಲ್ಲೆಗಳಲ್ಲಿ ಈವರೆಗೆ 177 ಕಾಗೆಗಳು ಸಾವನ್ನಪ್ಪಿವೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ 13 ಕಾಗೆಗಳು ಸಾವನ್ನಪ್ಪಿವೆ.
ಹಿಮಾಚಲ ಪ್ರದೇಶದ ಪಾಂಗ್ ಅಣೆಕಟ್ಟು ಅಭಯಾರಣ್ಯದಲ್ಲಿ ಒಂದು ವಾರದಲ್ಲಿ 1,000ಕ್ಕೂ ಹೆಚ್ಚು ವಲಸೆ ಹಕ್ಕಿಗಳು ಮೃತಪಟ್ಟಿವೆ. ಪಾಂಗ್ ಅಣೆಕಟ್ಟು ಅಭಯಾರಣ್ಯದಲ್ಲಿ ಪ್ರತಿ ವರ್ಷ ಅಕ್ಟೋಬರ್ನಿಂದ ಮಾರ್ಚ್ವರೆಗೆ ರಷ್ಯಾ, ಸೈಬೀರಿಯಾ, ಮಧ್ಯ ಏಷ್ಯಾ, ಚೀನಾ, ಟಿಬೆಟ್ ಮುಂತಾದ ದೇಶಗಳಿಂದ ವಿವಿಧ ಜಾತಿಗಳ ವರ್ಣರಂಜಿತ ಪಕ್ಷಿಗಳು ಬಂದು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಈಗ ಈ ಪಕ್ಷಿಗಳು ಇದ್ದಕ್ಕಿದ್ದಂತೆ ಸಾಯುತ್ತಿದ್ದು, ಹಕ್ಷಿ ಜ್ವರ ಭೀತಿಯಿಂದಾಗಿ ಸರೋವರದಲ್ಲಿ ಎಲ್ಲ ರೀತಿಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಹಕ್ಕಿ ಜ್ವರದ ವೈರಸ್ ಕೋಳಿಗಳಲ್ಲಿಯೂ ಕಂಡು ಬಂದರೆ ಅದು ಅಪಾಯವಾಗಲಿದೆ ಎಂದು ತಜ್ಞರು ಹೇಳುತ್ತಾರೆ. ಕೋಳಿಗಳು ಮನುಷ್ಯರಿಗೆ ವೈರಸ್ ಹರಡುವ ಸಾಧ್ಯತೆ ಹೆಚ್ಚು. ಇದಲ್ಲದೇ ಚಳಿಗಾಲದ ವಲಸೆಗಾಗಿ ಸಾವಿರಾರು ವಿದೇಶಿ ಪಕ್ಷಿಗಳು ರಾಜ್ಯಕ್ಕೆ ಬಂದಿವೆ. ಅವುಗಳಿಂದಲೂ ವೈರಸ್‌ಗಳ ಭಯ ಪ್ರಾರಂಭವಾಗಿದೆ.