ಹೆಲ್ಸಿಂಕಿ / ನವದೆಹಲಿ: ಭಾರತದಲ್ಲಿ ತನ್ನ 4ಜಿ ನೆಟ್‌ವರ್ಕ್ ಬಲಪಡಿಸಲು ಮತ್ತು 5ಜಿ ಸಾಮರ್ಥ್ಯ ಹೆಚ್ಚಿಸಲು, ಭಾರ್ತಿ ಏರ್‌ಟೆಲ್ 1 ಬಿಲಿಯನ್ (ಸುಮಾರು 7,636 ಕೋಟಿ ರೂ.) ವೆಚ್ಚದ ಬಹು ವರ್ಷದ ಒಪ್ಪಂದವನ್ನು ನೋಕಿಯಾದೊಂದಿಗೆ ಮಾಡಿಕೊಂಡಿದೆ.
ಏರ್‌ಟೆಲ್ ನೆಟ್‌ವರ್ಕ್‌ನಲ್ಲಿ ಅತಿದೊಡ್ಡ 4ಜಿ ಮಾರಾಟಗಾರರಾಗಿರುವ ನೋಕಿಯಾ, ಭವಿಷ್ಯದಲ್ಲಿ 5ಜಿ ಸಂಪರ್ಕ ಒದಗಿಸಲು ಈ ಒಪ್ಪಂದ ಸಹಾಯ ಮಾಡಲಿದೆ.
"ನಾವು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ನೋಕಿಯಾದೊಂದಿಗೆ ಕೆಲಸ ಮಾಡುತ್ತಿದ್ದೇವೆ. ನಾವು 5ಜಿ ಯುಗಕ್ಕೆ ತಯಾರಿ ನಡೆಸುತ್ತಿರುವಾಗ ನಮ್ಮ ನೆಟ್‌ವರ್ಕ್ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ಇನ್ನಷ್ಟು ಸುಧಾರಿಸಲು ನೋಕಿಯಾದ ಎಸ್‌ಆರ್‌ಎನ್ ಉತ್ಪನ್ನಗಳನ್ನು ಬಳಸುವುದರಲ್ಲಿ ಸಂತೋಷಪಡುತ್ತೇವೆ" ಎಂದು ಭಾರ್ತಿ ಏರ್ಟೆಲ್ನ ಎಂ.ಡಿ ಮತ್ತು ಸಿಇಒ ಗೋಪಾಲ್ ವಿಟ್ಟಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
"ನಾವು ಭಾರ್ತಿ ಏರ್‌ಟೆಲ್‌ನೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡಿದ್ದೇವೆ. ಈ ದೀರ್ಘ ಕಾಲೀನ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸಲು ಸಂತೋಷಪಡುತ್ತೇವೆ. ಈ ಯೋಜನೆಯು ಏರ್‌ಟೆಲ್ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸಂಪರ್ಕ ನೀಡುತ್ತದೆ. 5ಜಿ ಸೇವೆಗಳಿಗೆ ಅಡಿಪಾಯ ಹಾಕುತ್ತದೆ" ಎಂದು ನೋಕಿಯಾದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೀವ್ ಸೂರಿ ವಿವರಿಸಿದರು.