ನವದೆಹಲಿ : ದೆಹಲಿಯಿಂದ ಸಿಡ್ನಿಗೆ ತೆರಳಿದ್ದ ಏರ್ ಇಂಡಿಯಾ ವಿಮಾನದ ಪೈಲಟ್ ಒಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 16 ರಂದು ಪೈಲಟ್ನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ನೆಗೆಟಿವ್ ವರದಿ ಬಂದಿತ್ತು. ಹೀಗಾಗಿ ನಿಯಮದ ಪ್ರಕಾರ, ಜೂನ್ 20 ರ ದೆಹಲಿ - ಸಿಡ್ನಿ ವಿಮಾನದಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡಲಾಗಿತ್ತು. ವಿಮಾನ ಹಾರಾಟ ಪ್ರಾರಂಭಿಸುವ ಮೊದಲು ಮತ್ತೆ ಸ್ಯಾಂಪಲ್ಸ್ ತೆಗೆದುಕೊಳ್ಳಲಾಗಿತ್ತು. ಇದರ ವರದಿ ಪಾಸಿಟಿವ್ ಬಂದಿದೆ.
ಸದ್ಯ ಪೈಲಟ್ ಮತ್ತು ಇಬ್ಬರು ಸಿಬ್ಬಂದಿಯನ್ನ ಸಿಡ್ನಿಯಲ್ಲಿ ಐಸೋಲೇಟ್ ಮಾಡಲಾಗಿದೆ. ಇತರ ಯಾವುದೇ ಕ್ಯಾಬಿನ್ ಕ್ರೂ ಅಥವಾ ಪ್ರಯಾಣಿಕರು ಪೈಲಟ್ನೊಂದಿಗೆ ಸಂಪರ್ಕ ಹೊಂದಿರದ ಕಾರಣ ಯಾರನ್ನೂ ಕ್ವಾರಂಟೈನ್ ಮಾಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಿ -ಫ್ಲೈಟ್ ಪ್ರೊಟೋಕಾಲ್ ಪ್ರಕಾರ, ವಿಮಾನ ನಿರ್ಗಮನದ ದಿನಾಂಕಕ್ಕಿಂತ ಐದು ದಿನಗಳ ಮೊದಲು ಪೈಲಟ್ ನಿಗದಿತ ಸ್ಥಳಕ್ಕೆ ಭೇಟಿ ನೀಡಿ ಕೋವಿಡ್ ಪರೀಕ್ಷೆಗೆ ಸ್ಯಾಂಪಲ್ಸ್ ನೀಡಬೇಕಾಗುತ್ತದೆ. ಜೂನ್ 20 ರ ದೆಹಲಿ - ಸಿಡ್ನಿ ವಿಮಾನ ನಿರ್ಗಮಿಸುವ ನಾಲ್ಕು ದಿನಗಳ ಮೊದಲು ಪೈಲಟ್ಗೆ ನೆಗೆಟಿವ್ ಬಂದಿದ್ದರಿಂದ ಅವರಿಗೆ ಕೆಲಸ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ವಿಮಾನ ಹಾರಾಟಕ್ಕೆ ಸ್ವಲ್ಪ ಮೊದಲು ಎರಡನೇ ಬಾರಿಗೆ ಯಾಕೆ ಸ್ಯಾಂಪಲ್ಸ್ ನೀಡಿದರು ಎಂಬುವುದು ಸ್ಪಷ್ಟವಾಗಿಲ್ಲ.
ಜೂನ್ 20 ರಂದು ಸಿಡ್ನಿಗೆ ಪ್ರಯಾಣಿಸಿದ ವಿಮಾನ ವಂದೇ ಭಾರತ್ ಮಿಷನ್ ಭಾಗವಾಗಿತ್ತು.