ಕೋಯಿಕೋಡ್: ಕೋಯಿಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರನ್ವೇನಲ್ಲಿ ಅಪಘಾತಕ್ಕೀಡಾಗಿ ಎರಡು ಭಾಗಗಳಾಗಿದೆ. ಈ ದುರ್ಘಟನೆಯಲ್ಲಿ ಇಬ್ಬರು ಪೈಲಟ್ ಮೃತಪಟ್ಟಿದ್ದಾರೆ ಎಂದು ಏರ್ ಇಂಡಿಯ ಎಕ್ಸ್‌ಪ್ರೆಸ್ ದೃಢಪಡಿಸಿದೆ.
ಮೃತರನ್ನು ಏರ್ ಇಂಡಿಯಾ ಕ್ಯಾಪ್ಟನ್ ದೀಪಕ್ ವಸಂತ್ ಸಾಠೆ ಮತ್ತು ಸಹ ಪೈಲಟ್ ಅಖಿಲೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ಪೈಲಟ್ ಮತ್ತು ಸಹ ಪೈಲಟ್‌ನ ಮೃತದೇಹಗಳು ಕೋಯಿಕೋಡ್‌ನ ಮಿಮ್ಸ್ ಆಸ್ಪತ್ರೆಯಲ್ಲಿವೆ. ಸಾಂಕ್ರಾಮಿಕ ರೋಗದಿಂದಾಗಿ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆತರುವ ವಂದೇ ಭಾರತ ಮಿಷನ್‌ನ ಭಾಗವಾಗಿ ವಿಮಾನ ಹಾರಾಟ ಸೇವೆಯಲ್ಲಿ ನಿರತರಾಗಿದ್ದರು.
ಕ್ಯಾಪ್ಟನ್ ದೀಪಕ್ ವಸಂತ್ ಸಾಠೆ ಅವರು ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿಯಾಗಿದ್ದು, ಅಂಬಾಲಾದಲ್ಲಿ ಮಿಗ್ -21 ಯುದ್ಧ ವಿಮಾನವನ್ನು 17 ಸ್ಕ್ವಾಡ್ರನ್ನೊಂದಿಗೆ ಹಾರಿಸಿದ್ದರು. 1999ರ ಕಾರ್ಗಿಲ್ ಯುದ್ಧದಲ್ಲಿ ಸ್ಕ್ವಾಡ್ರನ್ ಪಾಲ್ಗೊಂಡಿತ್ತು. 1981ರಲ್ಲಿ ಸೇವೆಗೆ ಸೇರಿದ್ದರು. 22 ವರ್ಷಗಳ ಕಾಲ ವಾಯುಪಡೆಯಲ್ಲಿ ಸೇವೆ ಸಲ್ಲಿಸಿ 2003ರಲ್ಲಿ ಸ್ಕ್ವಾಡ್ರನ್ನ ಕ್ಯಾಪ್ಟನ್ ಆಗಿ ನಿವೃತ್ತರಾದರು. ವಾಯುಪಡೆಯ ತರಬೇತಿ ಅಕಾಡೆಮಿಯಲ್ಲಿ ಬೋಧಕನಾಗಿಯೂ ಸೇವೆ ಸಲ್ಲಿಸಿದ್ದ ಸಾಥೆ, ಐಎಎಫ್‌ನಿಂದ ನಿವೃತ್ತಿ ಹೊಂದಿದ ಬಳಿಕ ನಾಗರಿಕ ಹಾರಾಟದಲ್ಲಿ ಸೇವೆ ಸಲ್ಲಿಸಲು ಏರ್ ಇಂಡಿಯಾಕ್ಕೆ ಸೇರಿದರು.
ಮುಂಬೈನ ಪವಾಯಿಯಲ್ಲಿ ವಾಸಿಸುತ್ತಿರುವ ಕ್ಯಾಪ್ಟನ್ ಕುಟುಂಬಕ್ಕೆ ಈ ದುರಂತದ ಬಗ್ಗೆ ಮಾಹಿತಿ ನೀಡಲಾಗಿದ್ದು, ಬೆಳಗಿನ ವೇಳೆಗೆ ಕೇರಳ ತಲುಪುವ ನಿರೀಕ್ಷೆಯಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ. ವರದಿಗಳ ಪ್ರಕಾರ, ಸಾಠೆ ಅವರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಮೂಲಗಳ ಪ್ರಕಾರ, ಸಾಠೆ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ (ಎನ್‌ಡಿಎ) 58ನೇ ರಾಷ್ಟ್ರಪತಿ ಚಿನ್ನದ ಪದಕ ಪಡೆದಿದ್ದರು. 127 ಪೈಲಟ್‌ಗಳ ಕೋರ್ಸ್‌ನಲ್ಲಿ ಸ್ವೋರ್ಡ್ ಆಫ್ ಆನರ್ ಆಗಿದ್ದರು. ಭಾರತೀಯ ವಾಯುಸೇನೆಯಲ್ಲಿ ಟೆಸ್ಟ್ ಪೈಲಟ್ ಆಗಿದ್ದರೂ ಬೋಯಿಂಗ್ 737 ವಾಣಿಜ್ಯ ವಿಮಾನಗಳನ್ನು ನಿರ್ವಹಿಸುವಲ್ಲಿ ಪರಿಣಿತರಾಗಿದ್ದರು.