ಅಹಮದಾಬಾದ್ (ಗುಜರಾತ್): ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ತಜ್ಞರು ಗುಜರಾತ್‌ನ ಅಹಮದಾಬಾದ್ ನಗರದ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿ ಮತ್ತು ಕೊರೊನಾ ಸಾವು-ನೋವುಗಳು ಹೆಚ್ಚಾಗುತ್ತಿರುವ ಬಗ್ಗೆ ಅಲ್ಲಿನ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ದಾರೆ.
ಏಮ್ಸ್ ನಿರ್ದೇಶಕ ಮತ್ತು ಶ್ವಾಸಕೋಶ ಶಾಸ್ತ್ರಜ್ಞ ಡಾ.ರಂದೀಪ್ ಗುಲೇರಿಯಾ ಮತ್ತು ಏಮ್ಸ್ ವೈದ್ಯಕೀಯ ವಿಭಾಗದ ಡಾ.ಮನೀಶ್ ಸೋನೆಜಾ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿ, ಕೊರೊನಾಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಸಿಬ್ಬಂದಿ ಭೇಟಿಯಾಗಿ ಮಾರ್ಗದರ್ಶನ ನೀಡಿದರು. ಈ ವೇಳೆ ಪ್ರಧಾನ ಕಾರ್ಯದರ್ಶಿ (ಆರೋಗ್ಯ) ಜಯಂತಿ ರವಿ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು.
ಅಹಮದಾಬಾದ್ ಸಿವಿಲ್ ಆಸ್ಪತ್ರೆ ನಗರದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಮಾರ್ಗದರ್ಶನ ಮಾಡಲು ಗುಜರಾತ್ ಸಿಎಂ ವಿಜಯ್ ರೂಪಾನಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ ಕಾರಣದಿಂದ ಅವರು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಇದಾದ ನಂತರ ನಗರದ ಸರ್ದಾರ್ ವಲ್ಲಭಾಯ್ ಪಟೇಲ್ ಆಸ್ಪತ್ರೆಗೆ ಭೇಟಿ ನೀಡಲು ಏಮ್ಸ್ ವೈದ್ಯರು ನಿರ್ಧರಿಸಿದ್ದಾರೆ.
ಗುಜರಾತ್‌ನಲ್ಲಿ ಒಟ್ಟು 7,403 ಕೊರೊನಾ ಪ್ರಕರಣಗಳಿದ್ದು, ಅದರಲ್ಲಿ ಅಹಮದಾಬಾದ್ ಜಿಲ್ಲೆಯಲ್ಲೇ 5,260 ಸೋಂಕಿತರು ಕಂಡುಬಂದಿದ್ದಾರೆ. ರಾಜ್ಯದಲ್ಲಿ 449 ಸಾವುಗಳ ಪೈಕಿ 343 ಅಹಮದಾಬಾದ್ ನಗರದಲ್ಲೇ ಸಂಭವಿಸಿವೆ. ನಗರದ ಸಿವಿಲ್ ಆಸ್ಪತ್ರೆಯಲ್ಲಿ ಕನಿಷ್ಠ 204 ರೋಗಿಗಳು ಸಾವನ್ನಪ್ಪಿದ್ದರೆ, 92 ಮಂದಿ ಸರ್ದಾರ್ ವಲ್ಲಭಭಾಯ್ ಆಸ್ಪತ್ರೆಯಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ.