ಚೆನ್ನೈ: ತಮಿಳುನಾಡಿನಲ್ಲಿ ಚುನಾವಣೆ ಕಾವು ಜೋರಾಗಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಆದ್ರೆ ಬಿಜೆಪಿ ನಡೆಸುವ ಪ್ರಚಾರಕ್ಕೆ ಆಡಳಿತಾರೂಢ ಪಕ್ಷ ಎಐಎಡಿಎಂಕೆ ವಿಘ್ನ ತರಲು ಶತ ಪ್ರಯತ್ನ ನಡೆಸುತ್ತಿದೆ ಎನ್ನಲಾಗ್ತಿದೆ.
ತಮಿಳುನಾಡಿನಲ್ಲಿ ಬಿಜೆಪಿ ಕೈಗೊಂಡಿರುವ ಒಂದು ತಿಂಗಳ ವೆಟ್ರಿವೇಲ್ ಯಾತ್ರೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಡಳಿತಾರೂಢ ಎಐಎಡಿಎಂಕೆ, ತಮಿಳುನಾಡಿನ ಜನರನ್ನು ಜಾತಿ, ಮತಗಳ ಆಧಾರದಲ್ಲಿ ಒಡೆಯುವುದಕ್ಕೆ ನಾವು ಬಿಡುವುದಿಲ್ಲ ಎಂದು ಹೇಳಿದೆ.
ನ.21 ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿರುಚೆಂದೂರಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಈ ಭೇಟಿ ಮತ್ತು ರಾಜ್ಯದಲ್ಲಿ ಬಿಜೆಪಿ ವೆಟ್ರಿವೇಲ್ ಯಾತ್ರೆ ಕೈಗೊಂಡಿರುವುದರ ಬಗ್ಗೆ ನಮಥು ಅಮ್ಮಾ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಜನರನ್ನು ಜಾತಿ-ಮತಗಳ ಆಧಾರದಲ್ಲಿ ವಿಭಜಿಸುವ ಯಾತ್ರೆಗಳಿಗೆ ಎಐಎಡಿಎಂಕೆ ಅವಕಾಶ ನೀಡುವುದಿಲ್ಲ. ಇದನ್ನು ಕುರುಪ್ಪರ್ ಕೊಟ್ಟಮ್ (ಕಂದ ಶಷ್ಠಿ ಕವಚಕ್ಕೆ ಅಳವಡಿಸುವ ಆಯುಧ) ವನ್ನು ಹಿಡಿದಿರುವವರು ಹಾಗೂ ಕೇಸರಿ ಧ್ವಜ ಹಿಡಿದಿರುವವರು ತಮಿಳುನಾಡಿನ ಜನರು ಪಾಲಿಸುತ್ತಿರುವ ಏಕತೆ ಹಾಗೂ ಸೌಹಾರ್ದತೆಯನ್ನು ಅರ್ಥ ಮಾಡಿಕೊಳ್ಳಬೇಕೆಂದು ಎಐಎಡಿಎಂಕೆ ಹೇಳಿದೆ.
ವೆಟ್ರಿವೇಲ್ ಯಾತ್ರೆಗೆ ತಡೆಯೊಡ್ಡುವ ಪ್ರಯತ್ನದಿಂದ ಆಗುವ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿರುವ ಬಿಜೆಪಿ ಮಹಿಳಾ ವಿಭಾಗದ ರಾಷ್ಟ್ರೀಯ ಅಧ್ಯಕ್ಷೆ ವನತಿ ಶ್ರೀನಿವಾಸನ್ ಅವರ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ನಮಥು ಅಮ್ಮಾ, ಮಾನವಿಯತೆಗಾಗಿಯೇ ಧರ್ಮ ಇರುವುದೇ ಹೊರತು ಭಾವೋದ್ರೇಕಗಳನ್ನು ಕೆರಳಿಸುವುದಕ್ಕೆ ಅಲ್ಲವೆಂದು ತಿರುಗೇಟು ನೀಡಿದ್ದಾರೆ.
ಕಳೆದ ಗುರುವಾರವಷ್ಟೇ ಮದ್ರಾಸ್ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದ ತಮಿಳುನಾಡು ಸರ್ಕಾರ, ಕೊರೊನಾ ಸೋಂಕು ಕಾರಣದಿಂದಾಗಿ ವೆಟ್ರಿವೇಲ್ ಯಾತ್ರೆಗೆ ಅನುಮತಿ ನೀಡಲಾಗಿಲ್ಲ ಎಂದಿತ್ತು. ಆದರೆ, ಶುಕ್ರವಾರ ಬೆಳಗ್ಗೆ ಎಲ್.ಮುರುಗನ್, ಸಿ.ಟಿ.ರವಿ ಮತ್ತು ಅಣ್ಣಾಮಲೈ ನೇತೃತ್ವದಲ್ಲಿ ತಿರುವಲ್ಲೂರು ಜಿಲ್ಲೆಯ ಥಿರುತ್ತಾನಿ ಮುರುಗನ್ ದೇವಾಲಯದಿಂದ ಯಾತ್ರೆ ಆರಂಭಿಸಿತು. ಚೆನ್ನೈ-ತಿರುವಲ್ಲೂರು ಗಡಿಯಲ್ಲಿ ಈ ಯಾತ್ರೆ ತಡೆದ ಪೊಲೀಸರು, ಮುರುಗನ್ ಮತ್ತು ಕೆಲವೇ ಮಂದಿ ಕಾರ್ಯಕರ್ತರಿಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದರು. ಬಳಿಕ ಅನುಮತಿ ಇಲ್ಲದಿದ್ದರೂ ಯಾತ್ರೆ ನಡೆಸಿದ ಕಾರಣಕ್ಕಾಗಿ ಅವರೆಲ್ಲರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದರು.
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ತಮಿಳುನಾಡಿನಲ್ಲಿ ‘ಮಿತ್ರ’ ಪಕ್ಷಗಳ ಮಧ್ಯೆಯೇ ಮುಸುಕಿನ ಗುದ್ದಾಟ ಏರ್ಪಟ್ಟಿದೆ.