ಜೈಪುರ: ಕಳೆದ 25 ವರ್ಷಗಳಿಂದ ನೀರಿನ ಬಿಕ್ಕಟ್ಟಿನಿಂದ ಬಳಲುತ್ತಿದ್ದ ಜೈಪುರದ ಜಾಬ್ನರ್ ಪ್ರದೇಶ ಸೇರಿದಂತೆ ಅನೇಕ ನಗರಗಳಿಗೆ ಇದೀಗ ಕೃಷಿ ವಿಶ್ವವಿದ್ಯಾಲಯ ಆಪತ್ಬಾಂದವನಾಗಿದೆ. ಇಲ್ಲಿ ಕಂಡು ಹಿಡಿಯಲಾಗಿರುವ ಹೊಸ ತಂತ್ರಜ್ಞಾನದಿಂದ ಅವರ ನೀರಿನ ದಾಹ ತೀರಿದೆ.
ರಾಜಸ್ಥಾನದ ಪಶ್ಚಿಮ ಪ್ರದೇಶಗಳಾದ ಬಾರ್ಮರ್, ಜೈಸಲ್ಮೇರ್, ಬಿಕಾನೇರ್ ಜನರು ನೀರು ಪಡೆದುಕೊಳ್ಳಲು ಕಿಲೋಮೀಟರ್ ಪ್ರಯಾಣಿಸಬೇಕಾಗಿತ್ತು. ಜತೆಗೆ ರಾಜಧಾನಿ ಜೈಪುರದಿಂದ 40 ಕಿ.ಮೀ ದೂರದಲ್ಲಿರುವ ಜಾಬ್ನರ್ ಪ್ರದೇಶದ ಸ್ಥಿತಿ ಕೂಡ ಹೇಳತೀರದಾಗಿದ್ದು, ಕುಡಿಯುವ ನೀರು ಪಡೆದುಕೊಳ್ಳಲು ನಿತ್ಯ ಟ್ಯಾಂಕರ್ಗಳ ಮೊರೆ ಹೋಗಬೇಕಾಗಿತ್ತು. ಆದರೆ, ಇದೀಗ ವಿವಿಯ ನೀರಿನ ಕೊಯ್ಲು ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ತಕ್ಷಣವೇ ಸ್ಥಾಪನೆಗೊಂಡಿರುವ ಅತ್ಯಂತ ಹಳೇ ಕೃಷಿ ವಿಶ್ವವಿದ್ಯಾಲಯ ಜಾಬ್ನರ್ ಪ್ರದೇಶದಲ್ಲಿದೆ. 125 ಹೆಕ್ಟೇರ್ ಪ್ರದೇಶದಲ್ಲಿರುವ ಈ ವಿವಿ 1985ರವರೆಗೆ ಯಾವುದೇ ನೀರಿನ ತೊಂದರೆ ಅನುಭವಿಸಿರಲಿಲ್ಲ. ಆದರೆ, 1985ರ ನಂತರ ಹಾಗೂ 1995ರ ಹೊತ್ತಿಗೆ ಅಂತರ್ಜಲ ಸಂಪೂರ್ಣವಾಗಿ ಕುಸಿದು, 25 ವರ್ಷಗಳಿಂದ ನೀರಿನ ಕೊರತೆ ಅನುಭವಿಸುವಂತಾಗಿದ್ದು, ಇದರ ಪಕ್ಕದ ಹಳ್ಳಿ, ನಗರಗಳಲ್ಲೂ ಈ ಸಮಸ್ಯೆ ಉದ್ಭವವಾಗಿತ್ತು.
ಪುರಸಭೆ ಅಧಿಕಾರಿಗಳ ಸಹಾಯದಿಂದ ಜ್ವಾಲಾ ಮಾತಾ ದೇವಸ್ಥಾನದ ಬೆಟ್ಟದ ಮೇಲೆ ಹರಿಯುವ ನೀರಿನಿಂದ ಇದೀಗ ನೀರಿನ ದಾಹ ತೀರಿಸಿಕೊಳ್ಳಲಾಗಿದೆ. ಅದಕ್ಕಾಗಿ 33 ಲಕ್ಷ ಲೀಟರ್ ಸಾಮರ್ಥ್ಯದ ಮೂರು ಕೊಳವೆ ಮತ್ತು 3 ಕೋಟಿ ಲೀಟರ್ ಸಾಮರ್ಥ್ಯದ ಒಂದು ಬಾವಿಯನ್ನ ನಿರ್ಮಿಸಲಾಗಿದೆ. ಬೆಟ್ಟದ ಕೆಳಗೆ ಹರಿದು ವ್ಯರ್ಥವಾಗುತ್ತಿದ್ದ ನೀರನ್ನ ಈ ಕೊಳದಲ್ಲಿ ಸಂಗ್ರಹಿಸಲು ಗಮನಹರಿಸಲಾಗಿದೆ. ಅಲ್ಲದೇ ಈ ಕ್ರಮದಿಂದ ಅಂತರ್ಜಲ ಮಟ್ಟವೂ ಹೆಚ್ಚಾಗಿದೆ.