ಶ್ರೀನಗರ: ಪುಲ್ವಾಮದಂತಹ ಭೀಕರ ದಾಳಿ ನಡೆಸಿದ ಪಾಕ್ ಮೂಲದ ಜೈಷೆ ಮೊಹಮ್ಮದ್ ಉಗ್ರ ಸಂಘಟನೆ ಭಾರತದ ನೆಲೆದಲ್ಲಿ ಮತ್ತೊಂದು ಭಯಾನಕ ದಾಳಿ ನಡೆಸಲು ಮುಂದಾಗಿದೆ ಎಂಬ ದಿಗಿಲು ಹುಟ್ಟಿಸುವ ಮಾಹಿತಿ ಹೊರಬಿದ್ದಿದೆ.
ಮುಂಬರುವ ದಿನಗಳಲ್ಲಿ ಉಗ್ರರ ಸಂಘಟನೆ ಇಂತಹದೊಂದು ವಿಕೃತಿ ನಡೆಸಲು ಯೋಜನೆ ರೂಪಿಸಿಕೊಂಡಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಭದ್ರತಾಪಡೆಗೆ ಜೆನರಿಕ್ ಇಂಟಲಿಜೆನ್ಸ್ ಇನ್ಪುಟ್ಸ್ನಿಂದ ಮಾಹಿತಿ ದೊರೆತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಇಂಟಲಿಜೆನ್ಸ್ ಅಧಿಕಾರಿ, ಜೈಷೆ ಮೊಹಮ್ಮದ್ ಇತರೆ ಉಗ್ರ ಸಂಘಟನೆಗಳ ನೆರವಿನೊಂದಿಗೆ ಭೀಕರ ದಾಳಿ ನಡೆಸಲು ಪ್ಲಾನ್ ಮಾಡಿದೆ ಎಂದು ಹೇಳಿದ್ದಾರೆ.
ಜೆನರಿಕ್ ಇಂಟಲಿಜೆನ್ಸ್ ಇನ್ಪುಟ್ ಎಂಬುದು ಉಗ್ರರ ಸಂಘಟನೆಗಳು, ಅದರ ನಿರ್ವಾಹಕರು ಹಾಗೂ ಸ್ಥಳೀಯ ಉಗ್ರ ಗುಂಪುಗಳ ನಡುವೆ ದಾಳಿ ಕುರಿತಾಗಿ ನಡೆಯುವ ಮಾತುಕತೆಯನ್ನು ಬಹಿರಂಗಪಡಿಸುವ ವಿಧಾನವಾಗಿದೆ. ಈ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸರಣಿ ಎಚ್ಚರಿಕೆಯನ್ನೂ ನೀಡುತ್ತದೆ. ಮತ್ತೊಂದು ವಿಧಾನವಾದ ಸ್ಪೆಸಿಫಿಕ್ ಇಂಟಲಿಜೆನ್ಸ್ ಇನ್ಪುಟ್, ಎಲ್ಲಿ, ಯಾವಾಗ ಉಗ್ರ ಸಂಘಟನೆ ದಾಳಿ ನಡೆಸಲಿದೆ ಎಂಬ ಖಚಿತ ಮಾಹಿತಿಯನ್ನು ನೀಡುವುದಾಗಿದೆ.
ಅಧಿಕಾರಿಗಳು ತಿಳಿಸಿರುವಂತೆ, ಈವರೆಗೆ ಸ್ಫೆಸಿಫಿಕ್ ಇಂಟಲಿಜೆನ್ಸ್ ಇನ್ಪುಟ್ನಿಂದ ಮಾಹಿತಿ ತಿಳಿದಿಲ್ಲ .
ಇನ್ನು ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಲೆಫ್ಟಿನೆಂಟ್ ಜನರಲ್ ಕೆ.ಜೆ.ಎಸ್. ಧಿಲ್ಲೋನ್ ತಿಳಿಸಿದಂತೆ, ಜೆಷೆ , ಲಷ್ಕರ್ -ಎ -ತೊಯ್ಬಾ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗಳೊಂದಿಗೆ ಸೇರಿ ಈ ದಾಳಿ ನಡೆಸಬಹುದು. ಇಲ್ಲವೇ ತಾನೇ ಸ್ವತಂತ್ರವಾಗಿ ದಾಳಿ ನಡೆಸಲು ಯೋಜನೆ ರೂಪಿಸಿದೆ ಎಂದಿದ್ದಾರೆ. ಉಗ್ರರನ್ನು ಸಮರ್ಥವಾಗಿ ಎದುರಿಸಲು ನಾವು ಸಿದ್ಧರಿದ್ದೇವೆ ಎಂದೂ ಅವರು ಭರವಸೆಯ ಮಾತುಗಳನ್ನಾಡಿದ್ದಾರೆ.
ಇದಕ್ಕಾಗಿಯೆ ಸಿಆರ್ಪಿಎಫ್ ತನ್ನ ಯೋಧರಿಗೆ, "wait, watch and take time" ಎಂಬ ತಂತ್ರಗಾರಿಕೆಯನ್ನು ಹೆಚ್ಚು ಅನಾಹುತಗಳಾಗದಂತೆ ತಡೆಯಲು ಬೋಧಿಸಿದೆ.